ರಶ್ಯದೊಂದಿಗಿನ ಒಪ್ಪಂದದಿಂದ ಇಂದು ಅಮೆರಿಕ ಹೊರಗೆ
ವಾಶಿಂಗ್ಟನ್, ಆ. 1: ಅಮೆರಿಕವು ಶುಕ್ರವಾರ ಇಂಟರ್‌ಮೀಡಿಯಟ್-ರೇಂಜ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್‌ಎಫ್) ಒಪ್ಪಂದದಿಂದ ಅಧಿಕೃತವಾಗಿ ಹೊರಬರಲಿದೆ. ಇದು ರಶ್ಯದೊಂದಿಗೆ ಹೊಸ ಶಸ್ತ್ರಾಸ್ತ್ರ ಸ್ಪರ್ಧೆಗೆ ದಾರಿ ಮಾಡಿಕೊಡಲಿದೆ.
ಈ ಒಪ್ಪಂದಕ್ಕೆ 1987ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಸೋವಿಯತ್ ನಾಯಕ ಮಿಖೈಲ್ ಗೋರ್ಬಚೆವ್ ಸಹಿ ಹಾಕಿದ್ದರು. ಈ ಎರಡು ದೇಶಗಳು ಸಾಂಪ್ರದಾಯಿಕ ಮತ್ತು ಪರಮಾಣು ಸೇರಿದಂತೆ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸುವುದನ್ನು ಒಪ್ಪಂದವು ನಿರ್ಬಂಧಿಸಿತ್ತು.
ಒಪ್ಪಂದದ ಶರತ್ತುಗಳನ್ನು ರಶ್ಯವು ಪದೇ ಪದೇ ಉಲ್ಲಂಘಿಸಿದೆ ಎಂದು ಆರೋಪಿಸಿ, ಒಪ್ಪಂದದಿಂದ ಹೊರಬರುವ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಈ ವರ್ಷದ ಆದಿ ಭಾಗದಲ್ಲಿ ಪ್ರಕಟಿಸಿತ್ತು. ಆದರೆ, ಈ ಆರೋಪವನ್ನು ರಶ್ಯ ನಿರಾಕರಿಸಿದೆ.
‘‘ಐಎನ್‌ಎಫ್ ಒಪ್ಪಂದದಿಂದ ನಮಗೆ ಒಳ್ಳೆಯದಾಗಿದೆ ಎಂದು ನನಗನಿಸುತ್ತದೆ. ಆದರೆ, ಎರಡೂ ಪಕ್ಷಗಳು ಅನುಸರಿಸಿದರೆ ಮಾತ್ರ ಒಪ್ಪಂದ ಇರುತ್ತದೆ’’ ಎಂದು ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಇತ್ತೀಚೆಗೆ ಹೇಳಿದ್ದಾರೆ.
‘‘ಅಮೆರಿಕವು ಆಗಸ್ಟ್ 2ರವರೆಗೆ ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವುದು. ಆ ಬಳಿಕ, ನಮ್ಮ ಹಿತಾಸಕ್ತಿಗೆ ಅನುಸಾರವಾಗಿ ನಾವು ಮುಂದುವರಿಯುತ್ತೇವೆ’’ ಎಂದು ಅವರು ಸಂಸದರಿಗೆ ತಿಳಿಸಿದರು.