ವೆನೆಝುವೆಲದ ಸಚಿವನನ್ನು ‘ಮೋಸ್ಟ್ ವಾಂಟಡ್’ ಪಟ್ಟಿಗೆ ಸೇರಿಸಿದ ಅಮೆರಿಕ
ವಾಶಿಂಗ್ಟನ್, ಆ. 1: ವೆನೆಝುವೆಲ ಸರಕಾರದ ಸಚಿವ ಹಾಗೂ ಶಂಕಿತ ಮಾದಕ ದ್ರವ್ಯ ಸಾಗಾಟಗಾರ ಟಾರೆಕ್ ಎಲ್ ಐಸಾಮಿಯನ್ನು ಅಮೆರಿಕದ ವಲಸೆ ಅಧಿಕಾರಿಗಳು ಅತ್ಯಂತ ಬೇಕಾದ ದೇಶಭ್ರಷ್ಟರ ಪಟ್ಟಿಗೆ ಸೇರಿಸಿದ್ದಾರೆ.
‘‘ಈ ಅತ್ಯಂತ ಬೇಕಾದ ದೇಶಭ್ರಷ್ಟನನ್ನು ನೀವು ನೋಡಿದ್ದೀರಾ?’’ ಎಂಬುದಾಗಿ ಅಮೆರಿಕದ ವಲಸೆ ಮತ್ತು ಸುಂಕ ಅನುಷ್ಠಾನ ಇಲಾಖೆಯು ಬುಧವಾರ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಜೊತೆಗೆ ವೆನೆಝುವೆಲದ ಕೈಗಾರಿಕಾ ಸಚಿವ ಹಾಗೂ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಮಾಜಿ ಉಪಾಧ್ಯಕ್ಷ ಐಸಾಮಿಯ ಚಿತ್ರವನ್ನೂ ಹಾಕಿದ್ದಾರೆ.
‘‘ಅವರು ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ಬೇಕಾಗಿದ್ದಾರೆ’’ ಎಂದು ಟ್ವೀಟ್ ಹೇಳಿದೆ.
ಅಮೆರಿಕದ ಫೆಡರಲ್ ಅಧಿಕಾರಿಗಳು ಮಾರ್ಚ್‌ನಲ್ಲಿ ಐಸಾಮಿ ವಿರುದ್ಧ ಮಾದಕ ದ್ಯವ್ಯ ಕಳ್ಳಸಾಗಣೆ ಮತ್ತು ಅಮೆರಿಕ ವಿಧಿಸಿದದ ದಿಗ್ಬಂಧನಗಳಿಂದ ನುಣುಚಿಕೊಂಡಿರುವ ಆರೋಪಗಳನ್ನು ಹೊರಿಸಿದ್ದಾರೆ.
ಐಸಾಮಿ ಬಂಧನಕ್ಕೊಳಗಾಗಿ ಗಡಿಪಾರುಗೊಂಡರೆ ಅವರು 30 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.