ದಾಬೋಲ್ಕರ್ ಪುಣ್ಯತಿಥಿಯಂದು ಸಿಎಂ, ಪ್ರಧಾನಿಯಿಂದ ಉತ್ತರ ಕೇಳುವ ‘ಸೂತ್ರಧಾರ ಯಾರು?’ ಅಭಿಯಾನ

Update: 2019-08-01 17:01 GMT

ಮುಂಬೈ, ಆ.1: ವಿಚಾರವಾದಿ ಡಾ ನರೇಂದ್ರ ದಾಭೋಳ್ಕರ್ ಹತ್ಯೆ ಪ್ರಕರಣದ ತನಿಖೆ ಸಾಗುತ್ತಿರುವ ರೀತಿ ಮತ್ತು ನಿಧಾನಗತಿಯ ತನಿಖೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಅಂಧಶ್ರದ್ಧೆ ನಿರ್ಮೂಲನ ಸಮಿತಿ(ಎಂಎಎನ್‌ಎಸ್), ಈ ಪ್ರಕರಣದ ರೂವಾರಿ ಯಾರು ಎಂದು ಸರಕಾರ ಉತ್ತರಿಸಬೇಕೆಂದು ಆಗ್ರಹಿಸಿ ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಿದೆ.

 ದಾಭೋಲ್ಕರ್ ಸ್ಥಾಪಿಸಿರುವ ಎಂಎಎನ್‌ಎಸ್‌ನ ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗ ಸಾಗುತ್ತಿರುವ ತನಿಖೆಯ ರೀತಿ ಪ್ರಶ್ನಾರ್ಹವಾಗಿದೆ. ಹತ್ಯೆ ಮಾಡಿದವರ ಬಗ್ಗೆ ಗಮನ ಹರಿಸದೆ, ಹತ್ಯೆಗೆ ವೈಯಕ್ತಿಕ ದ್ವೇಷ ಅಥವಾ ಹಣದ ವ್ಯವಹಾರ ಕಾರಣವೇ ಎಂಬ ಬಗ್ಗೆ ತನಿಖಾ ಸಂಸ್ಥೆ ಆದ್ಯತೆ ನೀಡಿದೆ. ತನಿಖೆ ನಡೆಯಬೇಕಿದ್ದ ಸುವರ್ಣ ಘಳಿಗೆ ಕಳೆದುಹೋಗಿದೆ. ಸನಾತನ ಸಂಸ್ಥೆಯ ಕೆಲವು ಕಾಲಾಳುಗಳನ್ನು ಬಂಧಿಸಿರುವುದನ್ನು ಬಿಟ್ಟರೆ ಹತ್ಯೆಯ ಪಿತೂರಿ ಮಾಡಿದವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಎಂಎನ್‌ಎಸ್‌ನ ಕಾರ್ಯಾಧ್ಯಕ್ಷ ಅವಿನಾಶ್ ಪಾಟೀಲ್ ಹೇಳಿದ್ದಾರೆ.

   ದಾಭೋಲ್ಕರ್ ಅವರ 6ನೇ ಪುಣ್ಯತಿಥಿ ಆಗಸ್ಟ್ 20ರಂದು ನಡೆಯಲಿದ್ದು ಅಂದು ಪ್ರಧಾನಿ ಮತ್ತು ಮುಖ್ಯಮಂತ್ರಿಯಿಂದ ಉತ್ತರ ಕೇಳುವ ‘ಸೂತ್ರಧಾರ ಯಾರೆಂದು ಉತ್ತರಿಸಿ’ ಎಂಬ ಅಭಿಯಾನ ಆಯೋಜಿಸಲಾಗಿದೆ. ದಾಭೋಲ್ಕರ್, ಪನ್ಸಾರೆ ಮತ್ತು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಉತ್ತರ ಕೇಳುವ ಈ ಅಭಿಯಾನ ಪ್ರಧಾನವಾಗಿ ಸಾಮಾಜಿಕ ಮಾಧ್ಯಮದಲ್ಲಿ ನಡೆಯಲಿದೆ.

ಈ ಮಧ್ಯೆ ಹೇಳಿಕೆ ನೀಡಿರುವ ಸನಾತನ ಸಂಸ್ಥೆ, ಕಳೆದ 6 ವರ್ಷದಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಸಿಟ್(ವಿಶೇಷ ತನಿಖಾ ಸಂಸ್ಥೆ)ಗೆ ಸನಾತನ ಸಂಸ್ಥೆಯ ಪಾತ್ರ ಸಾಬೀತುಪಡಿಸಲು ಇದುವರೆಗೆ ಸೂಜಿ ಮೊನೆಯಷ್ಟೂ ಪುರಾವೆ ದೊರೆತಿಲ್ಲ. ಆದ್ದರಿಂದ ಈ ಪ್ರಕರಣವನ್ನು ನ್ಯಾಯಾಲಯಕ್ಕೆ ವಹಿಸಬೇಕೆಂದು ಆಗ್ರಹಿಸಲು ಎಂಎನ್‌ಎಸ್‌ಗೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ತಿಳಿಸಿದೆ.

ಅಲ್ಲದೆ ಎಂಎನ್‌ಎಸ್‌ನ ಇತಿಹಾಸವನ್ನು ಕೆದಕಿದರೆ, ಅದರ ನಾಯಕರು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವುದು ತಿಳಿದುಬರುತ್ತದೆ. ನಕ್ಸಲ್ ಸಿದ್ಧಾಂತವನ್ನು ಬೆಂಬಲಿಸುವ ಸಂಸ್ಥೆಗಳ ಪಟ್ಟಿಯನ್ನು ಗೃಹ ಇಲಾಖೆ ಸಿದ್ಧಪಡಿಸಿದ್ದು ಇದರಲ್ಲಿ ಎಂಎನ್‌ಎಸ್ ಹೆಸರೂ ಸೇರಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹನ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News