ಜೆಎನ್‌ಯು : 48 ಶಿಕ್ಷಕರಿಗೆ ನೋಟಿಸ್ ಜಾರಿ

Update: 2019-08-01 17:18 GMT

ಹೊಸದಿಲ್ಲಿ, ಆ.1: ಕಳೆದ ವರ್ಷದ ಜುಲೈ 31ರಂದು ನಡೆದಿದ್ದ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ 48 ಶಿಕ್ಷಕರಿಗೆ ವಿವಿಯ ಉಪಕುಲಪತಿ ಎಂ ಜಗದೀಶ್ ಕುಮಾರ್ ನೋಟಿಸ್ ಜಾರಿಗೊಳಿಸಿದ್ದು, ಆಗಸ್ಟ್ 7ರೊಳಗೆ ಲಿಖಿತ ಉತ್ತರ ನೀಡದಿದ್ದರೆ ಏಕಪಕ್ಷೀಯ ವಿಚಾರಣೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

 ಉಪಕುಲಪತಿಗಳ ಈ ನಡೆ ಪ್ರತೀಕಾರದ ಕ್ರಮವಾಗಿದೆ ಎಂದು ಜೆಎನ್‌ಯು ಶಿಕ್ಷಕರ ಒಕ್ಕೂಟ ಪ್ರತಿಕ್ರಿಯಿಸಿದೆ. ಶಿಕ್ಷಕರ ವಿರುದ್ಧ ನಡೆಸುತ್ತಿರುವ ನಿರಂಕುಶ ಶಿಸ್ತು ಕ್ರಮಗಳ ಸರಣಿಯ ಮುಂದುವರಿದ ಭಾಗ ಇದಾಗಿದ್ದು ಕಿರುಕುಳ ಮತ್ತು ಬೆದರಿಕೆ ಇದರ ಉದ್ದೇಶವಾಗಿದೆ. ಜೆಎನ್‌ಯು ಆಡಳಿತ ಶಿಕ್ಷಕರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ನಡೆಸುತ್ತಿರುವ ಇಂತಹ ಕ್ರಮಗಳನ್ನು ಖಂಡಿಸಿ ಶಿಕ್ಷಕರ ಪರವಾಗಿ ನಿಲ್ಲುತ್ತೇವೆ ಎಂದು ಜೆಎನ್‌ಯು ಶಿಕ್ಷಕರ ಸಂಘ ತಿಳಿಸಿದೆ. ವಿವಿಯ ದುರಾಡಳಿತ ಮತ್ತು ಅಕ್ರಮದ ವಿರುದ್ಧ ಧ್ವನಿ ಎತ್ತಿರುವ ಶಿಕ್ಷಕರನ್ನು ಹತ್ತಿಕ್ಕುವ ಕ್ರಮ ಇದಾಗಿದೆ ಎಂದು ಸಂಘ ಖಂಡಿಸಿದೆ.

 ಉದ್ಯೋಗಿಗಳ ಸೇವೆಗೆ ಸಂಬಂಧಿಸಿದ ಶಾಸನ, ಅಧಿಸೂಚನೆ ಅಥವಾ ನಿಯಮವನ್ನು ್ನ ಜಾರಿಗೊಳಿಸುವಾಗ ಸಂಬಂಧಿತ ವಿವಿಗಳು ಕೇಂದ್ರ ನಾಗರಿಕ ಸೇವಾ ಕಾಯ್ದೆ(ಸಿಸಿಎಸ್)1965ರ ನಿಯಮ 14ನ್ನು ಪಾಲಿಸಬೇಕು ಎಂದು 2018ರ ಮೇ 1ರಂದು ಯುಜಿಸಿ- ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗದ 100 ಮೀಟರ್ ವ್ಯಾಪ್ತಿಯೊಳಗೆ ಪ್ರತಿಭಟನೆ ನಡೆಸುವಂತಿಲ್ಲ ಎಂಬ ದಿಲ್ಲಿ ಹೈಕೋರ್ಟ್‌ನ ಆದೇಶವನ್ನೂ ಈ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.

   ಇದನ್ನು ವಿರೋಧಿಸಿ ಜುಲೈ 31ರಂದು ಜೆಎನ್‌ಯು ವಿವಿಯ ಶಿಕ್ಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಟ್ವೀಟ್ ಮಾಡಿದ್ದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್, ಜೆಎನ್‌ಯು ಅಥವಾ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News