ಉಪ್ಪಿನಂಗಡಿ: ತ್ಯಾಜ್ಯದಿಂದ ಪರಿಸರ ಮಲೀನವಾಗದಂತೆ ಕಟ್ಟುನಿಟ್ಟಿನ ಕ್ರಮ

Update: 2019-08-01 17:29 GMT

ಉಪ್ಪಿನಂಗಡಿ: ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯದಿಂದ ಪರಿಸರ ಮಲೀನವಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಉಪ್ಪಿನಂಗಡಿ ಗ್ರಾ.ಪಂ. ಮುಂದಾಗಿದೆ. ತ್ಯಾಜ್ಯವನ್ನು ವಿಂಗಡಿಸಿ ಮರು ಬಳಕೆ ಮಾಡುವ ಯೋಜನೆ ಹಾಕಿಕೊಂಡು ಇನ್ನೊಂದು ತ್ಯಾಜ್ಯ ಘಟಕದ ನಿರ್ಮಾಣ ಕಾಮಗಾರಿ ಉಪ್ಪಿನಂಗಡಿ ಗ್ರಾ.ಪಂ. ಕಚೇರಿಯ ಹಿಂಬದಿ ನಡೆಯುತ್ತಿದೆ. ಅದರ ಕಾಮಗಾರಿ ಭಾಗಶಃ ಮುಗಿದಿದ್ದು, ತ್ಯಾಜ್ಯ ವಿಲೇವಾರಿಯ ಸಮರ್ಪಕ ಅನುಷ್ಠಾನ ಇನ್ನು ಮುಂದೆ ನಡೆಯಲಿದೆ ಎಂದು  ಪಂಚಾಯತ್ ಅಧ್ಯಕ್ಷ ಕೆ. ಅಬ್ದುರ್ರಹ್ಮಾನ್ ತಿಳಿಸಿದರು.

ಗ್ರಾ.ಪಂ. ಸಭಾಂಗಣದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ತ್ಯಾಜ್ಯ ಘಟಕವೊಂದಿದ್ದು, ಅಲ್ಲಿ ತ್ಯಾಜ್ಯದಿಂದ ಗೊಬ್ಬರ ಮಾಡಲಾಗುತ್ತಿದೆ. ಆದರೆ ಉಪ್ಪಿನಂಗಡಿ ಪೇಟೆಯಲ್ಲಿ ತ್ಯಾಜ್ಯದ ಉತ್ಪತ್ತಿ ಹೆಚ್ಚಾಗಿರುವುದರಿಂದ ಈ ಘಟಕದ ಧಾರಣಾ ಸಾಮಥ್ರ್ಯ ಸಾಲುತ್ತಿಲ್ಲ. ಅಲ್ಲದೇ, ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ದೊರಕದ್ದರಿಂದ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಘನ ತ್ಯಾಜ್ಯಗಳ ವಿಲೇವಾರಿ ನಮಗೆ ಸಮಸ್ಯೆಯಾಗಿ ಕಾಡಿತ್ತು. ಈಗ ತ್ಯಾಜ್ಯವನ್ನು ಬೇರ್ಪಡಿಸಿ, ಮರು ಬಳಕೆಯಾಗುವ ತ್ಯಾಜ್ಯಗಳನ್ನು ಮರು ಬಳಕೆ ಮಾಡಲು ಹಾಗೂ ಮರು ಬಳಕೆಗೆ ಹಾಗೂ ಗೊಬ್ಬರ ತಯಾರಿಗೆ ಆಗದ ತ್ಯಾಜ್ಯವನ್ನು ಬರ್ನಿಂಗ್ ಮಾಡಲು ಚಿಂತಿಸಲಾಗಿದೆ. ತ್ಯಾಜ್ಯ ವಿಂಗಡನೆಗಾಗಿ ಗ್ರಾ.ಪಂ. ಹಿಂಬದಿಯೇ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿ ಭಾಗಶಃ ಮುಗಿದಿದೆ. ಇನ್ನು ಮುಂದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವಿಂಗಡಿಸಿ, ಮರು ಬಳಕೆಯಾಗುವ ತ್ಯಾಜ್ಯ ಮರುಬಳಕೆಗೆ, ಗೊಬ್ಬರವಾಗುವ ತ್ಯಾಜ್ಯ ಗೊಬ್ಬರಕ್ಕೆ ಹಾಗೂ ನಿರ್ನಾಮ ಮಾಡಬೇಕಾದ ತ್ಯಾಜ್ಯವನ್ನು ಬರ್ನಿಂಗ್ ಮೆಷಿನ್‍ನ ಮೂಲಕ ನಿರ್ನಾಮ ಮಾಡುವ ಕೆಲಸ ಮಾಡಲಾಗುವುದು. ಅದಕ್ಕಾಗಿ ಬರ್ನಿಂಗ್ ಮೆಷಿನ್‍ನನ್ನೂ ಖರೀದಿಸಲಾಗುವುದು ಎಂದರು.

ತ್ಯಾಜ್ಯದಿಂದ ಪರಿಸರ ಮಲೀನವಾಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಗ್ರಾ.ಪಂ. ಮುಂದಾಗಿದ್ದು, ಮುಂದಿನ 20 ದಿನಗಳೊಳಗೆ ಎಲ್ಲಾ ಅಂಗಡಿ, ಹೊಟೇಲ್, ವಸತಿ ಸಮುಚ್ಛಯದವರಿಗೆ ಬಕೆಟ್‍ಗಳನ್ನು ನೀಡಿ ತ್ಯಾಜ್ಯವನ್ನು ಒಣ ಕಸ ಹಾಗೂ ಹಸಿ ಕಸ ಎಂದು ವಿಂಗಡಿಸಿ ಬೇರ್ಪಡಿಸಿ ನೀಡಲು ಆದೇಶಿಸಲಾಗುವುದು. ಹಲವು ಕಡೆ ತ್ಯಾಜ್ಯ, ಶೌಚ ನೀರು ನೇತ್ರಾವತಿಯ ಒಡಲು ಸೇರುತ್ತಿದ್ದು, ಇನ್ನು ಮುಂದೆ ನದಿ ಬದಿಯ ಪ್ರತಿ ವಸತಿ ಸಮುಚ್ಛಯ, ಸಭಾಂಗಣ,ವಸತಿ ಸಮುಚ್ಛಯ ಸೇರಿದಂತೆ ನದಿಗೆ ತ್ಯಾಜ್ಯ ಹಾಕುವವರಿಗೆ ನದಿಗಳನ್ನು ಮಲೀನ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದಲ್ಲದೆ, ಪ್ರತಿಯೋರ್ವರು ಮಲೀನ ನೀರು ಶೇಖರಿಸಲು ಇಂಗು ಗುಂಡಿ ಹೊಂದಿರುವುದು ಕಡ್ಡಾಯ. 5 ಕ್ಕಿಂತ ಹೆಚ್ಚು ವಸತಿ ಸಮುಚ್ಚಯ ಹೊಂದಿರುವವರು ತ್ಯಾಜ್ಯ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಹೊಂದುವುದು ಕಡ್ಡಾಯ.  ಇನ್ನು ಮುಂದೆ ನದಿ, ಪರಿಸರ ಮಲೀನ ಮಾಡುವುದು ಕಂಡು ಬಂದರೆ ಅಂಥ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ಗ್ರಾ.ಪಂ.ನಿಂದ ನೀಡಿದ ಎನ್‍ಒಸಿಯನ್ನು ರದ್ದುಗೊಳಿಸಲಾಗುವುದು ಎಂದರು.

ಪರವಾನಿಗೆ ಪಡೆಯದಿದ್ದಲ್ಲಿ ದಂಡ: ಕೆಲವು ಕಡೆಗಳಲ್ಲಿ ಗ್ರಾ.ಪಂ.ನ ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಪರವಾನಿಗೆ ಪಡೆಯದೇ ವಾಸ್ತವ್ಯದ ಮನೆ ನಿರ್ಮಿಸಿದವರಿಗೆ ಎಸ್ಟಿಮೇಟ್‍ನ ಶೇ. 3ರಷ್ಟು ದಂಡ. ವಾಣಿಜ್ಯ ಕಟ್ಟಡದವರಿಗೆ ಎಸ್ಟಿಮೇಟ್‍ನ ಶೇ. 5ರಷ್ಟು ದಂಡ ವಿಧಿಸಲಾಗುವುದು ಎಂದ ಅಬ್ದುರ್ರಹ್ಮಾನ್ ಕೆ., ಪೇಟೆಯಲ್ಲಿ ಅನಧಿಕೃತ ಅಂಗಡಿಗಳಿದ್ದು, ಅದನ್ನು ತೆರವುಗೊಳಿಸಿ ಮಾಲನ್ನು ಮುಟ್ಟುಗೋಲು ಹಾಕಲಾಗುವುದು ಹಾಗೂ ಪೇಟೆಯೊಳಗೆ ವಾಹನಗಳನ್ನು ನಿಲ್ಲಿಸಲು ಗ್ರಾ.ಪಂ. ಈಗಾಗಲೇ ನಿಯಮಗಳನ್ನು ರೂಪಿಸಿದ್ದು, ಆದರೆ ಈ ನಿಯಮ ಪಾಲನೆಯಾಗುತ್ತಿಲ್ಲ. ಇನ್ನು ಮುಂದೆ ನಿಯಮ ಪಾಲನೆ ಮಾಡದ ವಾಹನಗಳ ಮೇಲೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು.

ಈಗಾಗಲೇ ದ.ಕ. ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಹಾಹಾಕಾರ ತಲೆದೋರಲಿದೆ. ಆದ್ದರಿಂದ ಕುಡಿಯುವ ನೀರನ್ನು ಕುಡಿಯುವ ಉಪಯೋಗಕ್ಕೆ ಅಲ್ಲದೇ, ಕೃಷಿಗೆ ಸೇರಿದಂತೆ ಇನ್ನಿತರ ಕೆಲಸಗಳಿಗಾಗಿ ದುರುಪಯೋಗ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಗ್ರಾ.ಪಂ. ಸದಸ್ಯ ಇಬ್ರಾಹೀಂ ಕೆ., ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಾಧವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News