ಪಾಳು ಬಿದ್ದಿರುವ ಕುಶಲಕರ್ಮಿಗಳ ಕೈಗಾರಿಕಾ ತರಬೇತಿ ಕೇಂದ್ರ !

Update: 2019-08-01 17:34 GMT

ಬಂಟ್ವಾಳ, ಜು. 1: ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸುಮಾರು ಒಂದೆಕರೆ ಪ್ರದೇಶದಲ್ಲಿರುವ (ಆರ್ಟಿಸಾನ್ ಟ್ರೈನಿಂಗ್ ಸೆಂಟರ್) ಕುಶಲಕರ್ಮಿಗಳ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರವು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸತತ ಇಪ್ಪತ್ತನಾಲ್ಕು ವರ್ಷಗಳಿಂದ ನಿರುಪಯುಕ್ತವಾಗಿ ಉಳಿದಿದೆ. ಈ ಕೇಂದ್ರಕ್ಕೆ ಮತ್ತೊಂದು ವರ್ಷ ದಾಟಿದರೆ ಬಾಗಿಲು ಮುಚ್ಚಿದ ಸಾಧನೆಯ ಬೆಳ್ಳಿಹಬ್ಬವನ್ನು ಆಚರಿಸಬಹುದು.

ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರ, ವಾಹನ ರಿಪೇರಿ, ಜನರಲ್ ಇಂಜಿನಿಯರಿಂಗ್ ಮತ್ತು ಪಂಪು ರಿಪೇರಿಯ ಕೇಂದ್ರವಾಗಿ ಸುತ್ತಮುತ್ತಲಿನ ನೂರಾರು ಮಕ್ಕಳಿಗೆ ತಾಂತ್ರಿಕ ತರಬೇತಿ ಶಿಕ್ಷಣ ಒದಗಿಸಿದ್ದ ಕುಶಲಕರ್ಮಿಗಳ ಕೈಗಾರಿಕಾ ತರಬೇತಿ ಕೇಂದ್ರವು ಅನಾಥ ವಾಗಿಯೇ ಉಳಿದುಕೊಂಡಿದೆ.

7 ವರ್ಷ ಮಾತ್ರ ಕಾರ್ಯಚಟುವಟಿಕೆ: 

1989ರಲ್ಲಿ ಅಂದಿನ ಜಿಪಂ ಅಧ್ಯಕ್ಷ ಸಂಕಪ್ಪ ರೈ ಅವಧಿಯಲ್ಲಿ ಈ ಕೇಂದ್ರ ಉದ್ಘಾಟನೆಗೊಂಡಿತ್ತು. ಅದಾದ ಬಳಿಕ ಸುಮಾರು ಏಳು ವರ್ಷ ಕಾರ್ಯಚಟುವಟಿಕೆ ನಡೆಯಿತು. ಇಲ್ಲಿಗೆ ಸ್ಥಳೀಯರಲ್ಲದೆ ಸುಳ್ಯ, ಪುತ್ತೂರು ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿ, ಕೈಗಾರಿಕಾ ತರಬೇತು ಕಲಿತು ಯಶಸ್ವಿಯಾಗಿ ಮರಳುತ್ತಿದ್ದರು. ಪ್ರಥಮ ಬ್ಯಾಚ್‍ನಿಂದ ತೊಡಗಿ ಮುಂದಿನ ಹಲವು ಬ್ಯಾಚುಗಳೂ ಮೂವತ್ತು ವಿದ್ಯಾರ್ಥಿ ಗಳಿಂದ ಭರ್ತಿಯಾಗುತ್ತಿದ್ದವು. ವಾಹನ ರಿಪೇರಿ, ಜನರಲ್ ಇಂಜಿನಿಯರಿಂಗ್ ಹಾಗೂ ಪಂಪು ರಿಪೇರಿ ಈ ಮೂರು ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೂಡ ನಿರ್ಮಾಣಗೊಂಡಿತ್ತು. ಆದರೆ, ದಿಢೀರನೆ ಇಲ್ಲಿ ಪ್ರವೇಶ ಪ್ರಕ್ರಿಯೆ, ಶಿಕ್ಷಣ ಕೊಡುವ ಕಾರ್ಯವನ್ನು ನಿಲ್ಲಿಸಲಾಯಿತು. 

ಅಕ್ರಮ ಚಟುವಟಿಕೆಗಳ ತಾಣ:

ಕೇಂದ್ರದಲ್ಲಿ ಬೋರ್ಡ್ ಒಂದು ಹಾಗೆಯೇ ಇದೆ ಎನ್ನುವುದನ್ನು ಹೊರತುಪಡಿಸಿದರೆ ಯಾವ ವಿಭಾಗದ ಕೊಠಡಿಗಳೂ ಸರಿಯಾಗಿಲ್ಲ. ಯಾರೂ ಇದರ ನಿರ್ವಹಣೆಯನ್ನು ಮಾಡುತ್ತಿಲ್ಲ ಎಂಬುದಕ್ಕೆ ಇಲ್ಲಿನ ಅವ್ಯವಸ್ಥೆಯೇ ಸಾಕ್ಷಿ. ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದಿದ್ದರೆ, ವರ್ಕ್ ಶಾಪ್‍ಗೆ ಎಂದು ಮೀಸಲಿರಿಸಲಾದ ಜೀಪ್ ತುಕ್ಕು ಹಿಡಿದಿದೆ. ಸುತ್ತಮುತ್ತಲಿನ ಭಿಕ್ಷುಕರು, ಅನೈತಿಕ ಚಟುವಟಿಕೆ ನಡೆಸುವವರು, ಅಕ್ರಮ ಚಟುವಟಿಕೆ ನಡೆಸಲು ಸೂಕ್ತ ಜಾಗವಾಗಿ ಮಾರ್ಪಾಡಾಗಿದೆ. 

ಇಲ್ಲಿ ಉದ್ಯೋಗ ತರಬೇತಿ ಕೇಂದ್ರ, ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಕಂಪ್ಯೂಟರ್ ಶಿಕ್ಷಣ ಅಥವಾ ಸಾರ್ವಜನಿಕ ಹಾಸ್ಪಿಟಲ್ ಮಾಡಬಹುದಿತ್ತು, ಐಟಿಐಯನ್ನು ಮರು ಚಾಲನೆ ಮಾಡಬಹುದಿತ್ತು. ಯಾವುದನ್ನೂ ಮಾಡದೆ ಹಾಗೆಯೇ ಅನಾಥವಾಗುಳಿದರೆ ಯಾರಿಗೂ ಉಪಯೋಗವಿಲ್ಲ ಎನ್ನುತ್ತಾರೆ ಸ್ಥಳೀಯರಾದ ದೇವಿ ಪ್ರಸಾದ್ ಕಡೇಶಿವಾಲಯ ಅವರು.

ಬಂಟ್ವಾಳ ತಾಲೂಕು ಮಟ್ಟದ ಕೈಗಾರಿಕಾ ವಿಸ್ತರಣಾಧಿಕಾರಿ ಬಂಟ್ವಾಳಕ್ಕೆ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಕಟ್ಟಡ ನಿರ್ವಹಣೆ ಕುರಿತು ಏನು ಕ್ರಮ ಕೈಗೊಂಡಿದ್ದಾರೆ ಎಂಬ ಕುರಿತು ಅವರು ಹೇಳಬೇಕಷ್ಟೇ ಎನ್ನುತ್ತಾರೆ ತಾಪಂ ಕಾರ್ಯನಿರ್ವಹಣಾಕಾರಿ ರಾಜಣ್ಣ. ಪ್ರತಿ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ಕುರಿತು ಕುರಿತು ಚರ್ಚೆಯಾಗುತ್ತಿದ್ದು, ಕೇಂದ್ರದ ಮರುಚಾಲನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ ಎಂಬುವುದು ಸಾರ್ವಜನಿಕರ ಆರೋಪ. 

92-93ನೇ ಇಸವಿಯ ಬ್ಯಾಚ್‍ಗಳಿಗೆ ನಾನು ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಸುಳ್ಯ, ಬೆಳ್ತಂಗಡಿ, ಪುತ್ತೂರಿನಿಂದ ವಿದ್ಯಾರ್ಥಿಗಳು ಆಗಮಿಸಿ ಶಿಕ್ಷಣ ಪಡೆದಿದ್ದರು. ಉತ್ತಮ ಸೌಕರ್ಯ, ಬ್ಯಾಚ್ ಭರ್ತಿ ವಿದ್ಯಾರ್ಥಿಗಳಿದ್ದರು. 
-ಉತ್ತಮ್ ಶೆಟ್ಟಿ, ಉದ್ಯಮಿ, ಬೆಂಗಳೂರು

ಕುಶಲಕರ್ಮಿಗಳ ತರಬೇತಿ ಕೇಂದ್ರ ಇದಾಗಿದ್ದು, ಇದಕ್ಕೆ ಸಂಬಧಿಂಸಿ ಬಂಟ್ವಾಳ ಕೈಗಾರಿಕಾ ವಿಸ್ತರಣಾಧಿಕಾರಿ ಇದರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಈ ಕೇಂದ್ರದ ಕುರಿತು ಪರಿಶೀಲಿಸಿ ಏನು ಮಾಡಬಹುದು? ಎಂಬ ಕುರಿತು ಚರ್ಚಿಸಲಾಗುವುದು.
-ಮಂಜುನಾಥ ಹೆಗಡೆ, ಸಹಾಯಕ ನಿರ್ದೇಶಕರು, ಕೈಗಾರಿಕಾ ವಿಭಾಗ., ಜಿಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News