ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ವಿಧಾನ ಸಭೆಯಲ್ಲಿ ಬಿಜೆಪಿ ನಾಯಕನ ವಿವಾದ

Update: 2019-08-01 18:07 GMT

 ಭುವನೇಶ್ವರ, ಆ. 1: ತ್ರಿವಳಿ ತಲಾಕ್ ಮಸೂದೆ ಬೆಂಬಲಿಸಿ ಮಾತನಾಡಿದ ಸಂದರ್ಭ ‘ಮುಂಬೈ ಹಾಗೂ ಕೋಲ್ಕತ್ತಾ ರೆಡ್‌ಲೈಟ್ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಪ್ರಭುತ್ವ ಇದೆ’ ಎಂದು ಹೇಳುವ ಮೂಲಕ ಬಿಜೆಪಿ ನಾಯಕರೊಬ್ಬರು ಒಡಿಶಾ ವಿಧಾನ ಸಭೆಯಲ್ಲಿ ಗುರುವಾರ ವಿವಾದಕ್ಕೆ ಒಳಗಾಗಿದ್ದಾರೆ.

ಈ ಹೇಳಿಕೆಯನ್ನು ದಾಖಲೆಯಿಂದ ಕೂಡಲೇ ತೆಗೆದು ಹಾಕುವಂತೆ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಡಿಯ ಸದಸ್ಯರು ಆಗ್ರಹಿಸುತ್ತಿದ್ದರೂ ಸದನದಲ್ಲಿ ಬಿಜೆಪಿಯ ಉಪ ನಾಯಕ ಬಿ.ಸಿ. ಸೇಥಿ ದಿನಪತ್ರಿಕೆ ಹಾಗೂ ನಿಯತಕಾಲಿಕದ ಸಮೀಕ್ಷಾ ವರದಿ ಉಲ್ಲೇಖಿಸಿದರು.

‘‘ಸದನದಲ್ಲಿ ಸಮೀಕ್ಷೆಯ ವರದಿ ಉಲ್ಲೇಖಿಸಿದರೆ ತಪ್ಪೇನು ? ನಾನು ಯಾವುದೇ ಸಮುದಾಯದ ವಿರುದ್ಧ ಯಾವುದೇ ವ್ಯತ್ತಿರಿಕ್ತ ಹೇಳಿಕೆ ನೀಡಿಲ್ಲ. ಆದರೆ, ಮುಂಬೈ ಹಾಗೂ ಕೋಲ್ಕತಾದ ರೆಡ್‌ಲೈಟ್ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಪ್ರಭುತ್ವ ಇದೆ ಎಂಬ ಸಮೀಕ್ಷಾ ವರದಿ ಉಲ್ಲೇಖಿಸಿದೆ’’ ಎಂದು ಸೇಥಿ ಹೇಳಿದರು.

ಸಂಸತ್ತಿನಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಕಾಂಗ್ರೆಸ್ ಸದಸ್ಯರು ಟೀಕಿಸಿದ ಸಂದರ್ಭ ಅವರು ಈ ಪ್ರತಿಕ್ರಿಯೆ ನೀಡಿದರು. ಸಂಸತ್ತಿನಲ್ಲಿ ಮಂಜೂರಾಗುವ ಮೊದಲು ಈ ಮಸೂದೆಗೆ ತಿದ್ದುಪಡಿ ತರಬೇಕು ಎಂದು ಕಾಂಗ್ರೆಸ್ ಸದಸ್ಯರು ಬುಧವಾರ ಆಗ್ರಹಿಸಿದ್ದರು.

ಮೂರು ಬಾರಿ ತಲಾಕ್ ಹೇಳಿ ವಿಚ್ಛೇದನ ನೀಡುವುದನ್ನು ಶಿಕ್ಷಾರ್ಹ ಅಪರಾಧವಾಗಿಸುವ ತ್ರಿವಳಿ ತಲಾಕ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅಂಕಿತ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News