ಆ್ಯಶಸ್ ಸರಣಿ: ಆಸ್ಟ್ರೇಲಿಯ 154/8

Update: 2019-08-01 18:24 GMT

ಬರ್ಮಿಂಗ್‌ಹ್ಯಾಮ್, ಆ.1: ಇಲ್ಲಿ ಗುರುವಾರ ಆರಂಭಗೊಂಡ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್(38ಕ್ಕೆ 4) ಮತ್ತು ಕ್ರಿಸ್ ವೋಕ್ಸ್(35ಕ್ಕೆ 3) ದಾಳಿಗೆ ಸಿಲುಕಿದ ಆಸ್ಟ್ರೇಲಿಯ ಟೀ ವಿರಾಮದ ಹೊತ್ತಿಗೆ 53 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿದೆ.

ಏಕೈಕ ಅರ್ಧಶತಕ ದಾಖಲಿಸಿದ ಸ್ಟೀವ್ ಸ್ಮಿತ್ 66 ರನ್ ಮತ್ತು ಪೀಟರ್ ಸಿಡ್ಲಿ (4) ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಪಂದ್ಯ ಮತ್ತೆ ಆರಂಭಕ್ಕೆ ಮಳೆ ಅಡ್ಡಿಪಡಿಸಿದೆ. ಟಾಸ್ ಜಯಿಸಿದ ಆಸ್ಟ್ರೇಲಿಯ ಬ್ಯಾಟಿಂಗ್ ಆಯ್ದುಕೊಂಡಿತ್ತು. 35 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯದ ಅಗ್ರ ಸರದಿಯ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಕ್ಯಾಮರೊನ್ ಬ್ಯಾನ್‌ಕ್ರಾಫ್ಟ್ (8), ಡೇವಿಡ್ ವಾರ್ನರ್(2) ಮತ್ತು ಉಸ್ಮಾನ್ ಖ್ವಾಜಾ(13) ಔಟಾಗಿ ಪೆವಿಲಿಯನ್ ಸೇರಿದರು.

ನಾಲ್ಕನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಜೊತೆಯಾಗಿ ನಾಲ್ಕನೇ ವಿಕೆಟ್‌ಗೆ 64 ರನ್ ಜಮೆ ಮಾಡಿದರು. 35 ರನ್ ಗಳಿಸಿದ ಟ್ರಾವಿಸ್ ಹೆಡ್‌ರನ್ನು ಕ್ರಿಸ್ ವೋಕ್ಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ಮ್ಯಾಥ್ಯೂ ವೇಡ್ (1), ಟಿಮ್ ಪೈನೆ(5) , ಜೇಮ್ಸ್ ಪ್ಯಾಟಿನ್ಸನ್(0), ಪ್ಯಾಟ್ ಕಮಿನ್ಸ್(5) ಬೇಗನೆ ಪೆವಿಲಿಯನ್ ಸೇರಿದರು.

  44 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 122 ರನ್ ಗಳಿಸಿದ್ದ ಆಸ್ಟ್ರೇಲಿಯದ ಬ್ಯಾಟಿಂಗ್‌ನ್ನು ಸ್ಮಿತ್ ಮತ್ತು ಸಿಡ್ಲ್ ಆಧರಿಸಲು ಯತ್ನಿಸಿದ್ದಾರೆ. ಅವರು ಮುರಿಯದ ಜೊತೆಯಾಟದಲ್ಲಿ 32 ರನ್ ಸೇರಿಸಿದ್ದಾರೆ.

    ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧದ ಸಜೆಯ ಬಳಿಕ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಸ್ಮಿತ್ ಅವರನ್ನು ಅಭಿಮಾನಿಗಳು ಅವರ ಮಾಸ್ಕ್ ಧರಿಸಿ ಸ್ವಾಗತಿಸಿದರು. ಸ್ಮಿತ್ 25ನೇ ಅರ್ಧಶತಕ ದಾಖಲಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ 53 ಓವರ್‌ಗಳಲ್ಲಿ 154/8

(ಸ್ಮಿತ್ ಔಟಾಗದೆ 66, ಹೆಡ್ 35; ಬ್ರಾಡ್ 38ಕ್ಕೆ 4, ವೋಕ್ಸ್ 35ಕ್ಕೆ 3).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News