ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣದಂಡನೆ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

Update: 2019-08-01 18:32 GMT

ಹೊಸದಿಲ್ಲಿ, ಆ. 1: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣದಂಡನೆ ವಿಧಿಸುವ ಹಾಗೂ ಅಪ್ರಾಪ್ತರ ಮೇಲಿನ ಇತರ ಅಪರಾಧಗಳಿಗೆ ಹೆಚ್ಚಿನ ಶಿಕ್ಷೆ ನೀಡುವ ‘ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ’ (ಪೋಕ್ಸೊ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.

 ಲೈಂಗಿಕ ದೌರ್ಜನ್ಯದಿಂದ ಮಕ್ಕಳಿಗೆ ರಕ್ಷಣೆ (ತಿದ್ದುಪಡಿ) ಮಸೂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಲಿಂಗ ತಟಸ್ಥಗೊಳಿಸುವ ಉದ್ದೇಶ ಹೊಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸ್ಮೃತಿ ಇರಾನಿ ಹೇಳಿದರು.

ಈಗಾಗಲೇ ರಾಜ್ಯಸಭೆಯಿಂದ ಅಂಗೀಕಾರಗೊಂಡ ಈ ಮಸೂದೆ ಮಕ್ಕಳ ಅಶ್ಲೀಲ ಚಿತ್ರವನ್ನು ವ್ಯಾಖ್ಯಾನಿಸುತ್ತದೆ ಹಾಗೂ ಅದು ಶಿಕ್ಷಾರ್ಹ ಎಂದು ಪರಿಗಣಿಸಿದೆ ಎಂದು ಅವರು ತಿಳಿಸಿದರು.

ಪೋಕ್ಸೊ ತಿದ್ದುಪಡಿ ಮಸೂದೆಗೆ ಪಕ್ಷಬೇಧ ಮರೆತು ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ನಿರ್ದಿಷ್ಟ ಅಪರಾಧಕ್ಕೆ ಮರಣದಂಡನೆ ವಿಧಿಸಲು ಈ ಮಸೂದೆಯನ್ನು ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಕೆಲವರು ಆಗ್ರಹಿಸಿದರು.

ಮಸೂದೆ ಅಂಗೀಕರಿಸುವಂತೆ ಕೋರಿದ ಇರಾನಿ, ಇದು ಮತ ಬ್ಯಾಂಕ್‌ಗೆ ಸಂಬಂಧಿಸಿದ್ದಲ್ಲ. ಬದಲಾಗಿ ಭಾರತದ ಭವಿಷ್ಯವನ್ನು ರಕ್ಷಿಸಲು ಎಂದು ಹೇಳಿದರು.

ಸದನದಲ್ಲಿ ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್ ಉನ್ನಾವೊ ಅತ್ಯಾಚಾರ ವಿಷಯ ಪ್ರಸ್ತಾಪಿಸಿದರು. ಈ ಸಂದರ್ಭ ಇರಾನಿ ಅವರು, ಈ ಮಸೂದೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಹಾಗೂ ವೈಯುಕ್ತಿಕ ಲಾಭಕ್ಕಾಗಿ ರಾಜಕೀಯಗೊಳಿಸಬಾರದು ಎಂದರು.

ಹರಿದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಇರಾನಿ, ಶಾಸಕರು ಹಾಗೂ ಸಂಸದರನ್ನು ಶಿಕ್ಷಿಸುವ ಅಧಿಕಾರ ಕೂಡ ನ್ಯಾಯಾಲಯಕ್ಕೆ ಇದೆ ಎಂದರು.

ಹೆಣ್ಣು ಅಥವಾ ಗಂಡು ಎನ್ನದೆ ಒಟ್ಟು ಶೇ. 39 ಜನಸಂಖ್ಯೆಗೆ ಅಥವಾ 43 ಕೋಟಿ ಮಕ್ಕಳಿಗೆ ಕಾನೂನಿನ ರಕ್ಷಣೆಯನ್ನು ಈ ಮಸೂದೆ ಒದಗಿಸಲಿದೆ ಎಂದು ಅವರು ಹೇಳಿದರು. ಈ ಮಸೂದೆ ಮಕ್ಕಳ ಅಶ್ಲೀಲ ಚಿತ್ರಗಳ ಬಗ್ಗೆ ಕೂಡ ವ್ಯಾಖ್ಯಾನಿಸುತ್ತದೆ. ಆದುದರಿಂದ ಇಂತಹ ಹೇಯ ಅಪರಾಧದಲ್ಲಿ ತೊಡಗುವ ವಿಕೃತ ಕಾಮಿಗಳನ್ನು ಈ ಮಸೂದೆ ಶಿಕ್ಷಿಸುತ್ತದೆ ಎಂದು ಸ್ಮೃತಿ ಇರಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News