×
Ad

ಅಯೋಧ್ಯೆ ಮಧ್ಯಸ್ಥಿಕೆ ವಿಫಲ: ಇಲ್ಲಿದೆ ವಿಚಾರಣೆ ವೇಳಾಪಟ್ಟಿ

Update: 2019-08-02 09:27 IST

ಹೊಸದಿಲ್ಲಿ, ಆ.2: ಕಗ್ಗಂಟಾಗಿಯೇ ಉಳಿದಿರುವ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ಜಮೀನು ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಮಧ್ಯಸ್ಥಿಕೆ ಸಮಿತಿ, ಸಂಧಾನ ಸಾಧಿಸುವಲ್ಲಿ ವಿಫಲವಾಗಿದೆ. ಈ ಬಗ್ಗೆ ಗುರುವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಪ್ರತಿದಿನ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ. ದೈನಿಕ ವಿಚಾರಣೆಯ ಆರಂಭ ದಿನಾಂಕವನ್ನು ಶುಕ್ರವಾರ ಪ್ರಕಟಿಸಲಿದೆ.

ಅಲಹಾಬಾದ್ ಹೈಕೋರ್ಟ್ 2010ರ ಸೆಪ್ಟೆಂಬರ್ 30ರಂದು ನೀಡಿದ ತೀರ್ಪಿನಲ್ಲಿ ವಿವಾದಿತ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ರಾಮ್ ಲಲ್ಲಾ ಮತ್ತೊಂದನ್ನು ನಿರ್ಮೋಹಿ ಅಖಾಡ ಹಾಗೂ ಇನ್ನೊಂದನ್ನು ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು ಎಂದು ಸೂಚಿಸಲಾಗಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ.

ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಫ್‌ಎಂಐ ಕಲೀಫುಲ್ಲಾ, ಹಿರಿಯ ವಕೀಲ ಶ್ರೀರಾಮ್ ಪಾಂಚು ಮತ್ತು ರವಿಶಂಕರ್ ಅವರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿಗೆ, ಜುಲೈ 18ರಂದು ಕೊನೆಯ ಅವಕಾಶ ನೀಡಿ 15 ದಿನಗಳ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಪ್ರತಿಸ್ಪರ್ಧಿ ಗುಂಪುಗಳು ಈ ವಿಚಾರದಲ್ಲಿ ಒಮ್ಮತಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಸಂಧಾನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಸಮಿತಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

2019ರ ಮಾರ್ಚ್ 8ರಿಂದೀಚೆಗೆ 155 ದಿನಗಳ ಕಾಲ ಫೈಝಾಬಾದ್‌ನಲ್ಲಿ ನಡೆದ ಸಂಧಾನ ಮಾತುಕತೆ ಪ್ರಕ್ರಿಯೆಯಲ್ಲಿ ಹಲವು ಮುಖಂಡರು ಹಾಗೂ ಸಂಘ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News