ಬಿಎಸ್ಸೆಎನ್ನೆಲ್, ಎಂಟಿಎನ್‌ಎಲ್ ನ 1.98 ಲಕ್ಷ ಉದ್ಯೋಗಿಗಳಿಗೆ ವೇತನ ಪಾವತಿ ಬಾಕಿ !

Update: 2019-08-02 14:35 GMT

ಹೊಸದಿಲ್ಲಿ, ಆ.2: ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್‌ಎಲ್‌ನ ಸುಮಾರು 1.98 ಲಕ್ಷ ಉದ್ಯೋಗಿಗಳಿಗೆ ಜುಲೈ ತಿಂಗಳ ವೇತನ ಪಾವತಿಗೆ ಬಾಕಿಯಿದೆ ಎಂದು ಕಾರ್ಮಿಕ ಒಕ್ಕೂಟದ ಮುಖಂಡರು ಹೇಳಿದ್ದಾರೆ.

ಸಂಸ್ಥೆಯ ಉದ್ಯೋಗಿಗಳಿಗೆ ಜುಲೈ ತಿಂಗಳ ವೇತನವನ್ನು ಆಗಸ್ಟ್ 5ರೊಳಗೆ ಪಾವತಿಸಲಾಗುವುದು. ಇದಕ್ಕೆ ಅಗತ್ಯವಿರುವ ಹಣವನ್ನು ಆಂತರಿಕ ಸಂಚಯದ ಮೂಲಕ ಒಟ್ಟುಗೂಡಿಸಲಾಗುವುದು ಎಂದು ಬಿಎಸ್ಸೆಎನ್ನೆಲ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪಿಕೆ ಪೂರ್ವರ್ ಹೇಳಿದ್ದಾರೆ. ಆದರೆ ಈ ಬಗ್ಗೆ ತಮಗಿನ್ನೂ ಯಾವುದೇ ಮಾಹಿತಿಯಿಲ್ಲ ಎಂದು ಆಲ್ ಇಂಡಿಯಾ ಯೂನಿಯನ್ಸ್ ಆ್ಯಂಡ್ ಅಸೋಸಿಯೇಷನ್ಸ್ ಆಫ್ ಭಾರತ್ ಸಂಚಾರ್ ನಿಗಮ ಲಿ.(ಎಯುಎಬಿ) ಸಂಯೋಜಕ ಪಿ ಅಭಿಮನ್ಯು ಪ್ರತಿಕ್ರಿಯಿಸಿದ್ದಾರೆ.

ದೇಶದಾದ್ಯಂತ ಬಿಎಸ್ಸೆಎನ್ನೆಲ್ 1.76 ಲಕ್ಷ ಮತ್ತು ಎಂಟಿಎನ್‌ಎಲ್ ಸುಮಾರು 22 ಸಾವಿರ ಉದ್ಯೋಗಿಗಳನ್ನು ಹೊಂದಿದ್ದು ಎರಡೂ ಸಂಸ್ಥೆಗಳು ಕ್ರಮವಾಗಿ ತಿಂಗಳಿಗೆ 750ರಿಂದ 850 ಕೋಟಿ ರೂ. ಮತ್ತು 160 ಕೋಟಿ ರೂ. ವೇತನ ಪಾವತಿಸುತ್ತವೆ. ಇದುವರೆಗೆ ಪ್ರತೀ ತಿಂಗಳ ಕಡೆಯ ದಿನದಂದು ಮಾಸಿಕ ವೇತನ ಉದ್ಯೋಗಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಕಳೆದ ಫೆಬ್ರವರಿಯಲ್ಲೂ ಉದ್ಯೋಗಿಗಳ ವೇತನ ವಿಳಂಬವಾಗಿತ್ತು.

ಎಂಟಿಎನ್‌ಎಲ್‌ಗೆ ಬರಬೇಕಿರುವ ಕೆಲವು ಹೊರಬಾಕಿ ಹಣವನ್ನು ವಸೂಲು ಮಾಡಲಾಗುತ್ತಿದ್ದು ಆ ಬಳಿಕ ಶೀಘ್ರದಲ್ಲೇ ಆದ್ಯತೆಯ ಆಧಾರದಲ್ಲಿ ಹಣ ಪಾವತಿಸಲಾಗುತ್ತದೆ ಎಂದು ಎಂಎಟಿಎನ್‌ಲ್‌ನ ಮಾನವ ಸಂಪನ್ಮೂಲ ನಿರ್ದೇಶಕ ಸುನಿಲ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News