×
Ad

ಪತ್ನಿಯನ್ನು ಪಣಕ್ಕಿಟ್ಟು ಸೋತ ಜೂಜುಕೋರ, ಸಾಮೂಹಿಕ ಅತ್ಯಾಚಾರಗೈದ ಸ್ನೇಹಿತರು

Update: 2019-08-02 21:03 IST

ಲಕ್ನೋ, ಆ.2: ಜೂಜು ಮತ್ತು ಕುಡಿತಕ್ಕೆ ದಾಸನಾಗಿದ್ದ ವ್ಯಕ್ತಿ ಜೂಜಿನಲ್ಲಿ ಹಣವನ್ನೆಲ್ಲ ಕಳೆದುಕೊಂಡ ಬಳಿಕ ಪತ್ನಿಯನ್ನೇ ಪಣಕ್ಕಿಟ್ಟು ಸೋತ ಬಳಿಕ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದ ಹೇಯ ಘಟನೆ ಉತ್ತರ ಪ್ರದೇಶದ ಜೌನಪುರ ಜಿಲ್ಲೆಯ ಜಾಫರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತನ್ನ ಪತಿಯ ಸ್ನೇಹಿತ ಅರುಣ ಮತ್ತು ಸಂಬಂಧಿ ಅನಿಲ ಆಗಾಗ್ಗೆ ಮದ್ಯಪಾನ ಮಾಡಲು ಮತ್ತು ಜೂಜಾಡಲು ತಮ್ಮ ಮನೆಗೆ ಬರುತ್ತಿದ್ದರು. ಅದೊಂದು ದಿನ ಪತಿ ಜೂಜಾಡುವಾಗ ತನ್ನನ್ನೇ ಪಣಕ್ಕಿಟ್ಟಿದ್ದ. ಆತ ಸೋತ ಬಳಿಕ ಅರುಣ ಮತ್ತು ಅನಿಲ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಇದರಿಂದ ನೊಂದ ತಾನು ಸೋದರಮಾವನ ಮನೆಗೆ ತೆರಳಿದ್ದೆ. ಅಲ್ಲಿಗೆ ಬಂದಿದ್ದ ಪತಿ ತಾನು ತಪ್ಪು ಮಾಡಿದ್ದೇನೆ ಎಂದು ಹೇಳಿ ಕ್ಷಮೆ ಯಾಚಿಸಿದ್ದ. ನಂತರ ತಾನು ಮನೆಗೆ ಮರಳಲು ಆತನ ಕಾರಿನಲ್ಲಿ ತೆರಳಿದ್ದೆ. ಮಾರ್ಗ ಮಧ್ಯೆ ಕಾರು ನಿಲ್ಲಿಸಿದ್ದ ಪತಿ ಕಾದು ನಿಂತಿದ್ದ ಅರುಣ ಮತ್ತು ಅನಿಲ ತನ್ನ ಮೇಲೆ ಮತ್ತೆ ಸಾಮೂಹಿಕ ಅತ್ಯಾಚಾರವೆಸಗಲು ಅವಕಾಶ ಕಲ್ಪಿಸಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರು ತನ್ನ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದಾಗ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಈಗ ಜಾಫರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News