ಜುಲೈನಲ್ಲಿ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ 227 ಪದಕ ಜಯಿಸಿದ ಭಾರತದ ಅಥ್ಲೀಟ್‌ಗಳು

Update: 2019-08-02 18:28 GMT

ಹೊಸದಿಲ್ಲಿ, ಆ.2: ಭಾರತದ ಅಥ್ಲೀಟ್‌ಗಳು ಜುಲೈನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದು, ಕೇವಲ 31 ದಿನಗಳಲ್ಲಿ 9 ಕ್ರೀಡಾ ವಿಭಾಗಗಳಾದ ಅಥ್ಲೆಟಿಕ್ಸ್, ಕುಸ್ತಿ, ವೇಟ್‌ಲಿಫ್ಟಿಂಗ್, ಜುಡೊ, ಬ್ಯಾಡ್ಮಿಂಟನ್, ಬಾಕ್ಸಿಂಗ್, ಟೇಬಲ್ ಟೆನಿಸ್,ಪ್ಯಾರಾ-ಶೂಟಿಂಗ್ ಹಾಗೂ ಶೂಟಿಂಗ್‌ನಲ್ಲಿ ಒಟ್ಟು 227 ಪದಕಗಳನ್ನು ಬೇಟೆಯಾಡಿ ಗಮನ ಸೆಳೆದಿದ್ದಾರೆ.

ಓಟಗಾರ್ತಿ ಹಿಮಾ ದಾಸ್ ಎರಡು ವಾರದೊಳಗೆ ಐದು ಚಿನ್ನದ ಪದಕಗಳನ್ನು ಜಯಿಸಿ ದೇಶದ ಗಮನ ಸೆಳೆದಿದ್ದರು. ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಇಂಡೋನೇಶ್ಯದಲ್ಲಿ ನಡೆದ ಪ್ರೆಸಿಡೆಂಟ್ ಕಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕುಸ್ತಿಪಟು ವಿನೇಶ್ ಫೋಗಾಟ್ ಟರ್ಕಿಯಲ್ಲಿ ನಡೆದ ಯಾಸರ್ ಡೊಗು ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಜುಡೋಪಟು ತಬಾಬಿ ದೇವಿ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಶೂಟರ್‌ಗಳಾದ ಮೆಹುಲಿ ಘೋಷ್ ಹಾಗೂ ಇಲವೆನಿಲ್ ವಲಾರಿವನ್ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ನಗು ಬೀರಿದ್ದರು. 227 ಪದಕಗಳ ಪೈಕಿ ಝೆಕ್ ಗಣರಾಜ್ಯ, ಪೊಲ್ಯಾಂಡ್, ಕಝಕ್‌ಸ್ತಾನ ಹಾಗೂ ಕಿರ್ಗಿಸ್ತಾನದಲ್ಲಿ ನಡೆದ ಏಳು ಕ್ರೀಡಾಕೂಟಗಳಲ್ಲಿ ಭಾರತದ ಅಥ್ಲೀಟ್‌ಗಳು ಗರಿಷ್ಠ ಪದಕ(71)ಗಳನ್ನು ಗೆದ್ದುಕೊಂಡಿದ್ದರು.

ಸಮೋವಾದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ 35 ಪದಕಗಳನ್ನು ಬಾಚಿಕೊಂಡಿತ್ತು. ಭಾರತೀಯ ಶೂಟರ್‌ಗಳು ವಿಶ್ವಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಜರ್ಮನಿಯಲ್ಲಿ ನಡೆದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ 24 ಪದಕಗಳನ್ನು ಜಯಿಸಿದ್ದರು.

ಕ್ರೊಯೇಶಿಯದಲ್ಲಿ ನಡೆದ ಪ್ಯಾರಾ ಶೂಟಿಂಗ್ ವರ್ಲ್ಡ್‌ಕಪ್‌ನಲ್ಲಿ ಭಾರತೀಯ ಪ್ಯಾರಾ ಶೂಟರ್‌ಗಳು 9 ಪದಕಗಳ ಗೊಂಚಲು ಪಡೆದಿದ್ದರು. ತೈಪೆಯಲ್ಲಿ ನಡೆದಿದ್ದ ಜುಡೋ ಏಶ್ಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆರು ಪದಕಗಳನ್ನು ಗೆದ್ದುಕೊಂಡಿತ್ತು.

ಭಾರತೀಯ ಬಾಕ್ಸಿಂಗ್ ತಂಡ ಮೂರು ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಒಟ್ಟು 21 ಪದಕಗಳನ್ನು ಗೆದ್ದುಕೊಂಡಿದೆ. ಇಂಡೋನೇಶ್ಯದಲ್ಲಿ ಮಹಿಳಾ ಬಾಕ್ಸರ್‌ಗಳು 9, ಥಾಯ್ಲೆಂಡ್ ಹಾಗೂ ಕಝಕ್‌ಸ್ತಾನದಲ್ಲಿ ಪುರುಷ ಬಾಕ್ಸರ್‌ಗಳು ಕ್ರಮವಾಗಿ 8 ಹಾಗೂ 4 ಪದಕಗಳನ್ನು ಜಯಿಸಿದ್ದಾರೆ.

ಭಾರತದ ಕುಸ್ತಿಪಟುಗಳು ಜುಲೈನಲ್ಲಿ ನಡೆದ ಸ್ಪರ್ಧೆಗಳಲ್ಲಿ ಎರಡನೇ ಗರಿಷ್ಠ ಪದಕ ಜಯಿಸಿದ್ದಾರೆ. ಜುಲೈನಲ್ಲಿ ನಡೆದಿದ್ದ 5 ವಿವಿಧ ಕುಸ್ತಿ ಸ್ಪರ್ಧೆಗಳಲ್ಲಿ 50 ಪದಕಗಳನ್ನು ಗೆದ್ದುಕೊಂಡಿದ್ದು,ಜೂನಿಯರ್ ಬಾಕ್ಸರ್‌ಗಳು ಥಾಯ್ಲೆಂಡ್‌ನಲ್ಲಿ ನಡೆದಿದ್ದ ಏಶ್ಯ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 18 ಪದಕಗಳನ್ನು ಬಾಚಿಕೊಂಡಿದ್ದರು.

ಇದೇ ವೇಳೆ ಟೇಬಲ್ ಟೆನಿಸ್ ತಂಡ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಎಲ್ಲ 7 ಪದಕಗಳನ್ನು ಜಯಿಸಿ ಕ್ಲೀನ್‌ಸ್ವೀಪ್ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News