​ಅತ್ಯಾಚಾರ ಆರೋಪಿ ಶಾಸಕನ ಗುಣಗಾನ ಮಾಡಿದ ಬಿಜೆಪಿ ಶಾಸಕ !

Update: 2019-08-03 03:45 GMT
ಫೋಟೊ : www.ndtv.com

ಲಕ್ನೋ : ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಬಿಜೆಪಿ ಮುಖಂಡ ಕುಲದೀಪ್ ಸೆಂಗರ್ ಪರವಾಗಿ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಬಹಿರಂಗ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಉತ್ತರ ಪ್ರದೇಶದ ಹರ್ದೋಯಿ ಕ್ಷೇತ್ರದ ಶಾಸಕ ಆಶೀಸ್ ಸಿಂಗ್ ಆಶು, "ಸೆಂಗರ್ ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ" ಎಂದು ಹೇಳುವ ವೀಡಿಯೊ ಬಹಿರಂಗವಾಗಿದೆ. ಸಹೋದ್ಯೋಗಿ ಸೆಂಗರ್ ಸದ್ಯದಲ್ಲೇ ಜೈಲಿನಿಂದ ಹೊರಬರಲಿದ್ದಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

"ನಮ್ಮ ಸಹೋದರ ಕುಲದೀಪ್ ಸಿಂಗ್ ಇಂದು ನಮ್ಮೊಂದಿಗೆ ಇಲ್ಲಿ ಇಲ್ಲ. ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಶುಭ ಹಾರೈಸೋಣ. ಕಷ್ಟದ ದಿನಗಳನ್ನು ಎದುರಿಸಿ, ಹೋರಾಡಿ, ಅವುಗಳನ್ನು ದಾಟಿ ಅವರು ಬರಲಿ ಎಂದು ನಾವು ಆಶಿಸೋಣ. ನಾವು ಎಲ್ಲೇ ಇದ್ದರೂ ನಮ್ಮ ಶುಭ ಹಾರೈಕೆಗಳು ಅವರಿಗೆ ಇರುತ್ತವೆ" ಎಂದು ಉನ್ನಾವೊ ಸಮೀಪ ನಡೆದ ಪಂಚಾಯತ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ.

ಉಚ್ಚಾಟಿತ ಬಿಜೆಪಿ ನಾಯಕನ ಹುಟ್ಟೂರು ಇದಾಗಿದ್ದು, 2017ರ ಜೂನ್‌ನಲ್ಲಿ ಯುವತಿ ಮೇಲೆ ಸೆಂಗರ್ ಅತ್ಯಾಚಾರ ನಡೆಸಿದ್ದ ಎಂದು ಆಪಾದಿಸಲಾಗಿದೆ.

ಸಂತ್ರಸ್ತೆ ಯುವತಿಯ ತಂದೆ ಪೊಲೀಸ್ ಕಸ್ಟಡಿಯಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದು, ಇಬ್ಬರು ನಿಕಟ ಸಂಬಂಧಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಪೈಕಿ ಒಬ್ಬರು ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು.

ಸಂತ್ರಸ್ತೆ ಹಾಗೂ ಆಕೆಯ ವಕೀಲರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅತ್ಯಾಚಾರ ಸಂತ್ರಸ್ತೆಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News