ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್‌ ಭಾರತದಿಂದ ಗಡಿಪಾರು

Update: 2019-08-03 06:21 GMT

ಚೆನ್ನೈ, ಆ.3: ಯಾವುದೇ ಸೂಕ್ತ ಪ್ರಯಾಣ ದಾಖಲೆಗಳಿಲ್ಲದೆ ಗುರುವಾರ ಬೆಳಗ್ಗೆ ಬೋಟ್‌ನ ಮೂಲಕ ಚೆನ್ನೈನ ಬಂದರ್‌ಗೆ ಪ್ರವೇಶಿಸಿದ್ದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅಬ್ದುಲ್ ಗಫೂರ್‌ರನ್ನು ಶನಿವಾರ ಬೆಳಗ್ಗೆ ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಅಹ್ಮದ್ ಅದೀಬ್ ಭಾರತದಲ್ಲಿ ರಾಜಕೀಯ ಆಶ್ರಯ ಪಡೆಯುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ. ಇದೀಗ ಅವರು ಮಾಲ್ಡೀವ್ಸ್‌ನಲ್ಲಿ ಗೃಹ ಬಂಧನದಲ್ಲಿದ್ದಾರೆ.

  ವಿರ್ಗೊ-9 ಬೋಟ್‌ನಲ್ಲಿ ಆಗಮಿಸಿದ್ದ ಅಹ್ಮದ್ ಅದೀಬ್ ಹಾಗೂ ಬೋಟ್‌ನಲ್ಲಿದ್ದ ಇತರ 9 ಸಿಬ್ಬಂದಿಯನ್ನು ಅಂತರ್‌ರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ಮಾಲ್ಡೀವ್ಸ್‌ನ ಭದ್ರತಾ ಸಿಬ್ಬಂದಿಗೆ ಭಾರತೀಯ ತಟ ರಕ್ಷಕ ಪಡೆಯ ಸಿಬ್ಬಂದಿ ಹಸ್ತಾಂತರಿಸಿದೆ.

ಗುರುವಾರ ಬೆಳಗ್ಗೆ ಚೆನ್ನೈನ ಟ್ಯುಟಿಕೋರಿನ್ ಓಲ್ಡ್ ಪೋರ್ಟ್‌ಗೆ ವಿರ್ಗೊ-9 ಬೋಟ್ ಆಗಮಿಸಿದಾಗ ಪ್ರವೇಶವನ್ನು ನಿರಾಕರಿಸಲಾಗಿತ್ತು. ಅಧಿಕಾರಿಗಳು ಅದೀಬ್ ಹಾಗೂ ಇತರ ಸಿಬ್ಬಂದಿಯನ್ನು ಗುರುವಾರ ಹಾಗೂ ಶುಕ್ರವಾರ ವಿಚಾರಣೆಗೊಳಪಡಿಸಿದ್ದರು.

ಅಹ್ಮದ್ ಅದೀಬ್ 2015ರಲ್ಲಿ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನ ಅತ್ಯಂತ ಕಿರಿಯ ವಯಸ್ಸಿನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಅದೇ ವರ್ಷ ಆಗಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮೇಲೆ ಬಾಂಬ್ ದಾಳಿ ಯತ್ನದ ಆರೋಪದಲ್ಲಿ ಮೊದಲಿಗೆ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ ಬಳಿಕ ಬಂಧಿಸಲಾಗಿತ್ತು. ಮೇ ತಿಂಗಳಲ್ಲಿ ದೋಷಮುಕ್ತರಾಗಿ ಜೈಲಿನಿಂದ ಬಿಡುಗಡೆಯಾಗಿದ್ದರು. ಆದರೆ, ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಈಗಲೂ ಪ್ರತ್ಯೇಕ ವಿಚಾರಣೆ ಎದುರಿಸುತ್ತಿದ್ದಾರೆ. ್‌‌‌‌‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News