​ಬೌದ್ಧಿಕ ಬೆಳವಣಿಗೆಗೆ ನೈತಿಕ ನೆಲೆಗಟ್ಟು ಅಗತ್ಯ: ಡಾ. ಪಂಡಿತಾರಾಧ್ಯ ಸ್ವಾಮೀಜಿ

Update: 2019-08-03 12:58 GMT

ಮಂಗಳೂರು, ಆ.3: ಬೌದ್ಧಿಕ ಬೆಳವಣಿಗೆಗೆ ನೈತಿಕ ನೆಲೆಗಟ್ಟು ಇಲ್ಲದಾಗ ಸಾಮಾಜಿಕ ಅನಿಷ್ಠಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಒದಗಿಸಬೇಕು ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.

ಸಹಮತ ವೇದಿಕೆ ವತಿಯಿಂದ ಆ.1ರಿಂದ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಂಡ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಅಂಗವಾಗಿ ಇಂದು ದ.ಕ. ಜಿಲ್ಲಾ ಕಾರ್ಯಕ್ರಮವನ್ನು ನಗರದ ಪುರವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಬುನಾದಿ ಇಲ್ಲದೆ ನಿರ್ಮಿಸುವ ಕಟ್ಟಡ ಹೆಚ್ಚು ಕಾಲ ಬಾಳಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ದಿಕ್ಕು ತಪುತ್ತಿದೆ ಎಂಬ ಆಪಾದನೆಯನ್ನು ಹೊರಿಸಲಾಗುತ್ತಿರುವ ಯುವ ಪೀಳಿಗೆಯ ಒಳತುಡಿತವನ್ನು ಅರ್ಥ ಮಾಡಿಕೊಂಡು ಸ್ಫೂರ್ತಿ ತುಂಬುವ ಕೆಲಸ ಆಗಬೇಕು. ಇದು ಇಂದು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. 12ನೆ ಶತಮಾನದಲ್ಲಿ ಶರಣರು ಈ ಬಗ್ಗೆ ಗಂಭೀರವಾಗಿ ಚಿಂತಿಸಿದ್ದರು. ಈ ನಿಟ್ಟಿನಲ್ಲಿ ಅರಿವು ಅತೀ ವುುಖ್ಯ ಎಂದು ಅವರು ವಿಶ್ಲೇಷಿಸಿದರು.

ಹನ್ನೆರಡನೇ ಶತಮಾನದಲ್ಲಿ ಇದ್ದಂತಹ ಅನಿಷ್ಠ ಪದ್ಧತಿಗಳು ಇಂದಿಗೂ ಇವೆ. ಧಾರ್ಮಿಕ, ಕಂದಾಚಾರ, ಮೌಡ್ಯ, ಜಾತೀಯತೆ, ಪುರೋಹಿತ ಶಾಹಿ ಪದ್ಧತಿಗೆ ಅಂದಿನ ಕಾಲದಲ್ಲಿ ಮದ್ದು ನೀಡುವ ಕೆಲಸವನ್ನು ಬಸವಣ್ಣ ಮಾಡಿದ್ದಾನೆ. ಅನುಭವ ಮಂಟಪದ ಮುಖೇನ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ವಿಜ್ಞಾನ ಕ್ಷೇತ್ರ ಬಹಳಷ್ಟು ಸುಧಾರಣೆಯಾಗಿದೆ. ಆದರೆ, ರ್ಯಾಂಕ್ ಎಂಬ ಪದ್ಧತಿ ಬಂದ ಮೇಲೆ ವಿದ್ಯಾರ್ಥಿಗಳ ಜೀವನ ಮೌಲ್ಯ ಕುಸಿಯುತ್ತಿದೆ ಎಂದು ಹೇಳಿದರು.

ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಸ್ವಾಮೀಜಿ, ಎಲ್ಲವನ್ನೂ ಸಂಪಾದಿಸಿದ್ದರೂ ಮನೋಸ್ಥೈರ್ಯವಿಲ್ಲದೆ ಇದ್ದಾಗ ಇಂತಹ ಹೇಡಿತನಕ್ಕೆ ಕಾರಣವಾಗುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅನುತ್ತೀರ್ಣ ಆಗುವುದು ದೊಡ್ಡ ವಿಷಯವೇ ಅಲ್ಲ. ಆದರೆ ಜೀವನವೆಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತೀ ಮುಖ್ಯ ಎಂದರು.

ಚಲನಚಿತ್ರ ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾಹಿರಾತು ಜಾಲ ಜನರನ್ನು ದಾರಿ ತಪ್ಪಿಸುತ್ತಿದೆ. ಇದು ದಿನಂಪ್ರತಿ ನಡೆಯುವ ವಂಚನೆಯಾಗಿದ್ದು, ಜಾಹಿರಾತು ಹೆಸರಿನಲ್ಲಿ ಮೌಢ್ಯ ಪ್ರತಿಪಾದಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸಮಾಜದ ಆರೋಗ್ಯಕರ ವಿಚಾರಗಳಿಲ್ಲದೇ ಹೋದರೆ ಸಮಾಜ ವಿಘಟನೆಯಾಗುತ್ತದೆ ಎಂದು ಹೇಳಿದರು.

ಯಾರನ್ನೂ, ಯಾವುದನ್ನೂ ಗಾಢವಾಗಿ ನಂಬದ ಸಿನಿಕಥನ ಸಮಾಜವನ್ನು ಆಳುತ್ತಿದೆ. ಇದರ ಹಿಂದೆ ಗುಮಾನಿ, ಅನುಮಾನ ಸೇರಿದೆ. ಇಡೀ ವಿಶ್ವ ವಿಚಿತ್ರ ವೇಗಕ್ಕೆ ಬಲಿಪಶುವಾಗಿದೆ. ಸ್ವಾರ್ಥ ತುಂಬಿಕೊಂಡಿದೆ. ರಾತ್ರೋರಾತ್ರಿ ಸಿರಿವಂತರಾಗಬೇಕು ಎಂಬ ತವಕ ಇಂದಿನ ದಿನಗಳಲ್ಲಿದೆ. ಇದು ಶುದ್ಧೀಕರಣವಾಗಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ ಅನ್ಯ ಜಾತಿ, ಧರ್ಮದ ಗೆಳೆಯರ ಮನೆಗಳಿಗೆ ಭೇಟಿ ನೀಡಿ ಅವರೊಂದಿಗೆ ಬೆರೆತಾಗ ಸೌಹಾರ್ದತೆ, ಪ್ರೀತಿಯನ್ನು ಹಂಚಲು ಸಾಧ್ಯವಾಗುತ್ತದೆ. ಸಹಬಾಳ್ವೆ ಹೃದಯ ವೈಶಾಲ್ಯತೆಯನ್ನು ತರುತ್ತದೆ. ನಮ್ಮದಲ್ಲದವರನ್ನು ಗುಮಾನಿಯಿಂದ ನೋಡುವುದನ್ನು ನಾವು ಬಿಡಬೇಕು ಎಂದು ವಿದ್ಯಾರ್ಥಿಳಿಗೆ ಅವರು ಕಿವಿಮಾತು ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಯಿತು.

ಕಾರ್ಯಕ್ರಮವನ್ನು ಪ್ರೊ. ಕೆ.ಎಸ್. ಜಯಪ್ಪ ಸ್ವಾಗತಿಸಿ, ಎಚ್.ಎಂ. ಸೋಮೇಶೇಖರಪ್ಪ ವಂದಿಸಿದರು. ಡಾ. ಸತ್ಯನಾರಾಯಣ ಮಲ್ಲಿಪಟ್ಣ ಕಾರ್ಯಕ್ರಮ ನಿರೂಪಿಸಿದರು. ಶಿವಸಂಚಾರ, ಸಾಣೇಹಳ್ಳಿ ತಂಡದಿಂದ ವಚನ ಗಾಯನ ನೆರವೇರಿತು.

''ಮನುಷ್ಯ ಜೀವನವನ್ನು ತುಂಬಿದ ಚೀಲ (ವೃದ್ಧಾಪ್ಯ), ತೂತಿರುವ ಚೀಲ (ಯೌವ್ವನ) ಮತ್ತು ಖಾಲಿ ಚೀಲ (ಬಾಲ್ಯ) ಎಂಬ ಮೂರು ವಿಭಾಗಳಲ್ಲಿ ವಿಂಗಡಿಸಬಹುದು. ತೂತಿರುವ ಚೀಲದ ಮೇಲೆ ಏನೇ ವಸ್ತುಗಳನ್ನು ಹಾಕಿದರೆ ಕೆಳಗೆ ಸೋರುತ್ತದೆ. ಈ ರೀತಿಯ ಚೀಲವನ್ನು ಹೊಲಿಯುವ ಕೆಲಸ ಆಗಬೇಕಿದೆ. ತುಂಬಿರುವ ಚೀಲ ಅಂದರೆ ಚಿಕ್ಕ ಮಕ್ಕಳು. ಆ ಚೀಲದಲ್ಲಿ ಮಣ್ಣು, ಅಕ್ಕಿ, ಬೆಲ್ಲ, ಗೊಬ್ಬರ, ಬೇಳೆ, ಬಂಗಾರವನ್ನು ತುಂಬಿಸಬಹುದು. ಆದರೆ, ಚೀಲದಲ್ಲಿ ಯಾವುದನ್ನು ತುಂಬಿಸಬೇಕೆಂಬ ಹೊಣೆಗಾರಿಕೆ ನಮ್ಮಲ್ಲಿರಬೇಕು''.
- ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ.

'ಧರ್ಮ, ಜನಾಂಗದ ಮೇಲಿನ ದಬ್ಬಾಳಿಕೆ ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ'

ಧರ್ಮವೆಂಬುದು ವ್ಯಕ್ತಿಗತ ವಿಚಾರ. ಯಾರು ಯಾವ ಧರ್ಮವನ್ನು ಬೇಕಾದರೂ ಸ್ವೀಕರಿಸಬಹುದು, ಅನುಸರಿಸಬಹುದು. ಆದರೆ ಇನ್ನೊಂದು ಧರ್ಮ ಅಥವಾ ಜನಾಂಗದ ಮೇಲಿನ ದಬ್ಬಾಳಿಕೆಯನ್ನು ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ವಿದ್ಯಾರ್ಥಿಗಳ ಜತೆಗಿನ ಸಂವಾದದ ವೇಳೆ ವಿದ್ಯಾರ್ಥಿನಿಯೊಬ್ಬರ ಪ್ರ್ನೆಗೆ ಸ್ವಾಮೀಜಿ ಈ ಉತ್ತರ ನೀಡಿದರು.

ಜಾತಿಯನ್ನು ಅಳಿಸಲು ಸಾಧ್ಯವಿಲ್ಲ. ಆದರೆ ಸೌಹಾರ್ದತೆ, ಪ್ರೀತಿಗೆ ಯಾವ ಜಾತಿಯೂ ಅಡ್ಡಿ ಮಾಡುವುದಿಲ್ಲ. ಆದ್ದರಿಂದ ಮತೀಯ ಸೌಹಾರ್ದತೆಯನ್ನು ಸಾಧಿಸುವುದು ಅತೀ ಅಗತ್ಯ. ಶಿಕ್ಷಣ ಕ್ಷೇತ್ರದಲ್ಲಿ ಜಾತಿ ಆಧಾರದಲ್ಲಿ ಎಲ್ಲ ಸೌಲಭ್ಯ ಕೆಲ ವರ್ಗಗಳಿಗೆ ಮೀಸಲಾಗಿರುತ್ತದೆ. ತುಳಿತಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಈ ಮೀಸಲಾತಿ ಅಗತ್ಯ. ಆದರೆ ಅದಕ್ಕೆ ಮಿತಿಹಾಕಬೇಕಾದ ಬಗ್ಗೆ ಯೋಚಿಸಬೇಕಾಗಿದೆ. ಮೀಸಲಾತಿ ಶಿಕ್ಷಣಕ್ಕೆ ಮಾತ್ರ ಸೀಮಿತಗೊಂಡು ಭಡ್ತಿಗೆ ಅಗತ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ ಎಂದು ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಉತ್ತರಿಸಿದರು.

ಮೌಢ್ಯಗಳ ಕುರಿತಂತೆ ವಿದ್ಯಾರ್ಥಿನಿಯೊಬ್ಬರು ಗ್ರಹಣ ಹಿಡಿದಾಗ ಪಾತ್ರೆಯ ನೀರು ಚೆಲ್ಲಲಾಗುತ್ತದೆ. ಆದರೆ ನದಿ ನೀರು ಹೊರ ಹಾಕುತ್ತಾರಾ? ಇಂತಹ ಮೌಢ್ಯ ನಿವಾರಿಸಲು ಏನು ಮಾಡಬೇಕು ಪ್ರಶ್ನಿಸಿದಾಗ, ಮನೆಯ ಪಾತ್ರೆಯ ನೀರು ಚೆಲ್ಲುವವರು, ಬೆಣ್ಣೆ ತುಪ್ಪ ಯಾಕೆ ಚೆಲ್ಲುವುದಿಲ್ಲ. ಅದಕ್ಕೆ ಗ್ರಹಣ ಬಡಿದಿಲ್ಲವೇ ಎಂಬ ಪ್ರಶ್ನೆಯನ್ನು ಮನೆಯವರಿಗೆ ವಿದ್ಯಾರ್ಥಿಗಳು ಕೇಳುವಂತಾದರೆ ಮೌಢ್ಯ ತಾನಾಗಿಯೇ ನಿವಾರಣೆಯಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ನೈತಿಕ ಶಿಕ್ಷಣ ಪ್ರತ್ಯೇಕ ಭಾಗವಾಗದೆ, ಎಲ್ಲಾ ಪಠ್ಯಗಳಲ್ಲಿಯೂ ಅಂತರ್ಗತವಾಗಿಸುವುದು ಮುಖ್ಯ ಎಂದು ವಿದ್ಯಾರ್ಥಿನಿಯ ಪ್ರಶ್ನೆಯೊಂದಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯಿಸಿದರು.

ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರಶ್ನೆಳು ವಿದ್ಯಾರ್ಥಿಗಳಿಂದ ಕೇಳಲ್ಪಟ್ಟವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News