ತಮಗಾಗಿ ಕಾಶ್ಮೀರಿ ಜನರು ಸಾಯಲು ಸಿದ್ಧ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ, ಆದರೆ ಸರಕಾರ ಭೀತಿ ಹರಡುತ್ತಿದೆ

Update: 2019-08-03 13:23 GMT
Photo: The Financial Express

ಹೊಸದಿಲ್ಲಿ, ಆ.3:  ಉಗ್ರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಸರಕಾರ ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿದ್ದು, ಜತೆಗೆ  ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ. ಸರಕಾರವು ರಾಜ್ಯಾದ್ಯಂತ ಭೀತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ವಿಪಕ್ಷಗಳು ಸರಕಾರದ ಕ್ರಮವನ್ನು ಟೀಕಿಸಿವೆ.

“ಬಿಜೆಪಿ ಜಮ್ಮು ಕಾಶ್ಮೀರದಲ್ಲಿ ಭೀತಿ ಮತ್ತು ದ್ವೇಷವನ್ನು ಪಸರಿಸುತ್ತಿದೆ. ಅಲ್ಲಿಗೆ ಆಗಮಿಸಿದ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು  ತಾವು ಅಲ್ಲಿ ಶಾಂತಿಯಿಂದಿದ್ದರೂ ರಾಜ್ಯ ಬಿಟ್ಟು ತೆರಳುವಂತೆ ಸರಕಾರ ಸೂಚಿಸಿದೆ ಎನ್ನುತ್ತಿದ್ದಾರೆ. ತಮಗಾಗಿ ಕಾಶ್ಮೀರಿ ಜನರು ಜೀವಿಸಲು ಹಾಗೂ ಸಾಯಲು ಕೂಡ ಸಿದ್ಧ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಆದರೆ ಸರಕಾರವೇ  ತನ್ನ ಸೂಚನೆಗಳ ಮೂಲಕ ಭೀತಿ ಸೃಷ್ಟಿಸುತ್ತಿದೆ'' ಎಂದು ಹಿರಿಯ  ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

“ರಾಜ್ಯದ ಜನರು ಸದಾ ಭಯದಲ್ಲಿಯೇ ಜೀವಿಸುವಂತಾಗಿದೆ'' ಎಂದ ಅವರು, “ಕಳೆದ 30 ವರ್ಷಗಳಲ್ಲಿ ಇದು ಮೊದಲ ಬಾರಿಗೆ ನಡೆಯುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಾಗೂ ಅಟಲ್ ಸರಕಾರದ ಅವಧಿಯಲ್ಲೂ ಉಗ್ರ ಘಟನೆಗಳು ನಡೆದಿದ್ದವು. ಆದರೆ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರನ್ನು ರಾಜ್ಯ ಬಿಟ್ಟು ತೆರಳುವಂತೆ ಯಾವತ್ತೂ ಸೂಚಿಸಲಾಗಿರಲಿಲ್ಲ'' ಎಂದು ಆಝಾದ್ ಹೇಳಿದರು.

“ಜಮ್ಮು ಕಾಶ್ಮೀರದಲ್ಲಿ ಸರಕಾರ ಯಾವುದೇ ರಾಜಕೀಯ ಸಾಹಸಕ್ಕೆ ಕೈಹಾಕಬಾರದು, ಇದು ದೇಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಸರಕಾರ ಜಮ್ಮು ಕಾಶ್ಮೀರದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳಿಗೆ ವಿವರಣೆ ನೀಡಬೇಕು'' ಎಂದು ಸಿಪಿಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News