×
Ad

ವದಂತಿಗಳನ್ನು ನಂಬಬೇಡಿ,ಶಾಂತಿಯನ್ನು ಕಾಯ್ದುಕೊಳ್ಳಲು ಕಾರ್ಯಕರ್ತರಿಗೆ ತಿಳಿಸಿ

Update: 2019-08-03 19:46 IST

ಶ್ರೀನಗರ, ಆ.3: ಶಾಂತಿಯನ್ನು ಕಾಯ್ದುಕೊಳ್ಳುವಂತೆ ಮತ್ತು ಕಣಿವೆಯಲ್ಲಿ ಹರಿದಾಡುತ್ತಿರುವ ಅತಿರಂಜಿತ ವದಂತಿಗಳನ್ನು ನಂಬದಂತೆ ತಮ್ಮ ಬೆಂಬಲಿಗರಿಗೆ ತಿಳಿಸುವಂತೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಎಸ್.ಪಿ.ಮಲಿಕ್ ಅವರು ಶುಕ್ರವಾರ ತಡರಾತ್ರಿ ತನ್ನನ್ನು ಭೇಟಿಯಾಗಿದ್ದ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ನೇತೃತ್ವದ ವಿವಿಧ ಪಕ್ಷಗಳ ನಾಯಕರ ನಿಯೋಗಕ್ಕೆ ಸೂಚಿಸಿದ್ದಾರೆ.

ಸಂವಿಧಾನದ ವಿಧಿ 35-ಎ ಕುರಿತು ಖುದ್ದು ರಾಜ್ಯಪಾಲರೇ ಗುರುವಾರ ಬಾರಾಮುಲ್ಲಾದಲ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಅಮರನಾಥ ಯಾತ್ರಿಗಳಿಗೆ ಯಾತ್ರೆಯನ್ನು ಮೊಟಕುಗೊಳಿಸುವಂತೆ ಮತ್ತು ಸಾಧ್ಯವಾದಷ್ಟು ಶೀಘ್ರ ಕಣಿವೆ ರಾಜ್ಯವನ್ನು ತೊರೆಯುವಂತೆ ಸರಕಾರದ ಸಲಹೆ ಸೇರಿದಂತೆ ಶುಕ್ರವಾರದ ಬೆಳವಣಿಗೆಗಳಿಂದ ಕಾಶ್ಮೀರ ಕಣಿವೆಯಲ್ಲಿ ಸೃಷ್ಟಿಯಾಗಿರುವ ಆತಂಕದ ಸ್ಥಿತಿಯ ಕುರಿತು ನಿಯೋಗವು ತನ್ನ ಕಳವಳಗಳನ್ನು ವ್ಯಕ್ತಪಡಿಸಿತ್ತು. ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಕುರಿತು ಗಂಭೀರ ಮತ್ತು ವಿಶ್ವಾಸಾರ್ಹ ಬೇಹು ಮಾಹಿತಿಗಳು ಲಭಿಸಿದ್ದು, ತನ್ನೆಲ್ಲ ಪ್ರಜೆಗಳಿಗೆ ಭದ್ರತೆಯನ್ನು ಒದಗಿಸುವುದು ಸರಕಾರದ ಜವಾಬ್ದಾರಿಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರಿಗಳಿಗೆ ವಾಪಸಾಗುವಂತೆ ಸೂಚಿಸಲಾಗಿದೆ. ಯಾತ್ರಿಗಳು ಮತ್ತು ಪ್ರವಾಸಿಗಳು ಭಯೋತ್ಪಾದಕರ ದಾಳಿಗೆ ಗುರಿಯಾಗದಂತೆ ನೋಡಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯಪಾಲರು ನಿಯೋಗಕ್ಕೆ ತಿಳಿಸಿದ್ದ್ದಾರೆ ಎಂದರು.

ಸರಕಾರವು ಹೊರಡಿಸಿರುವ ಸಲಹಾಸೂಚಿಯನ್ನು ಸಂಬಂಧವೇ ಇಲ್ಲದ ಇತರ ವಿಷಯಗಳೊಂದಿಗೆ ಸೇರಿಸಿ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗುತ್ತಿದೆ ಎಂದೂ ರಾಜ್ಯಪಾಲರು ನಿಯೋಗಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News