ದಿಲ್ಲಿ: ಮುಂದುವರಿದ ವೈದ್ಯರ ಪ್ರತಿಭಟನೆ
ತುರ್ತು ಸೇವೆ ಪುನರಾರಂಭ, ರೋಗಿಗಳಿಗೆ ಕೊಂಚ ನೆಮ್ಮದಿ
ಹೊಸದಿಲ್ಲಿ, ಆ.3: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯನ್ನು ವಿರೋಧಿಸಿ ಕಿರಿಯ ವೈದ್ಯರು ಗುರುವಾರದಿಂದ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವಾದ ಶನಿವಾರವೂ ಮುಂದುವರಿದಿದ್ದು,ದಿಲ್ಲಿಯ ಹಲವಾರು ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಪುನರಾರಂಭಗೊಂಡಿರುವುದು ರೋಗಿಗಳಿಗೆ ಕೊಂಚ ನೆಮ್ಮದಿಯನ್ನು ನೀಡಿದೆ.
ಪ್ರತಿಭಟನಾನಿರತರಲ್ಲಿ ಕೇಂದ್ರ ಸರಕಾರದ ಅಧೀನದ ಏಮ್ಸ್ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಗಳ ವೈದ್ಯರೂ ಸೇರಿದ್ದು,ತಕ್ಷಣ ಕರ್ತವ್ಯಕ್ಕೆ ಹಾಜರಾಗದಿದ್ದರೆ ಸೇವೆಯಿಂದ ವಜಾದಂತಹ ಕಠಿಣ ಕ್ರಮಗಳನ್ನು ಜರುಗಿಸುವುದಾಗಿ ಆರೋಗ್ಯ ಸಚಿವಾಲಯವು ಎಚ್ಚರಿಕೆ ನೀಡಿದೆ. ಸಚಿವಾಲಯದ ಎಚ್ಚರಿಕೆಯ ಬಳಿಕ ಎರಡೂ ಆಸ್ಪತ್ರೆಗಳ ಆಡಳಿತಗಳು ಕರ್ತವ್ಯಕ್ಕೆ ಮರಳುವಂತೆ ನೋಟಿಸ್ ಹೊರಡಿಸಿದ್ದರಿಂದ ಪ್ರತಿಭಟನಾನಿರತರು ಆಕ್ರೋಶಗೊಂಡ ಹಿನ್ನೆಲೆಯಲ್ಲಿ ಏಮ್ಸ್ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಗಳ ಸುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಏಮ್ಸ್‌ನ ಕಿರಿಯ ವೈದ್ಯರು ಶುಕ್ರವಾರ ರಾತ್ರಿ ತುರ್ತು ಸೇವೆಗಳನ್ನು ಪುನರಾರಂಭಿಸಿದ್ದಾರೆ. ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ತುರ್ತು ಸೇವೆ ಸೇರಿದಂತೆ ಯಾವುದೇ ವಿಭಾಗದಲ್ಲಿಯೂ ಕಿರಿಯ ವೈದ್ಯರು ಸೇವೆಗೆ ಹಾಜರಾಗಿರಲಿಲ್ಲ.
ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಪ್ರದೇಶದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಮತ್ತು ಸಂಚಾರ ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತಿದ್ದಾರೆ ಎಂದು ಹಿರಿಯ ಪೋಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ದಿಲ್ಲಿ ಸರಕಾರವು ನಡೆಸುತ್ತಿರುವ ಕೆಲವು ಆಸ್ಪತ್ರೆಗಳು ಶನಿವಾರದಿಂದ ಎಲ್ಲ ಸೇವೆಗಳನ್ನು ಪುನರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅವರು ಶುಕ್ರವಾರ ಏಮ್ಸ್‌ನ ಮತ್ತು ವಿವಿಧ ಇತರ ಸಂಘಗಳ ಕಿರಿಯ ವೈದ್ಯರೊಂದಿಗೆ ಭೇಟಿ ಸಂದರ್ಭದಲ್ಲಿ ಕರ್ತವ್ಯಕ್ಕೆ ಮರಳುವಂತೆ ಕೋರಿಕೊಂಡಿದ್ದು,ಮಸೂದೆಯು ವೈದ್ಯರು ಮತ್ತು ರೋಗಿಗಳ ಹಿತಾಸಕ್ತಿ ರಕ್ಷಣೆಯ ಉದ್ದೇಶವನ್ನು ಹೊಂದಿದೆ ಎಂದಿದ್ದರು.
ಕಿರಿಯ ವೈದ್ಯರ ಮುಷ್ಕರದಿಂದಾಗಿ ಏಮ್ಸ್,ಎಲ್‌ಎನ್‌ಜೆಪಿ ಮತ್ತು ಇತರ ಹಲವಾರು ಆಸ್ಪತ್ರೆಗಳಲ್ಲಿಯ ರೋಗಿಗಳು ಕಳೆದೆರಡು ದಿನಗಳಿಂದ ವೈದ್ಯಕೀಯ ಸೇವೆಯನ್ನು ಪಡೆಯಲು ಪರದಾಡುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ದಿಲ್ಲಿಯ ನೆರೆಕರೆಯ ನಗರಗಳಿಂದ ಬಂದವರಾಗಿದ್ದಾರೆ.