ಅಸ್ಸಾಂನ ಎನ್‌ಆರ್‌ಸಿಯಂತೆ ದೇಶಾದ್ಯಂತ ಪೌರರ ನೋಂದಣಿಗೆ ಕೇಂದ್ರ ನಿರ್ಧಾರ

Update: 2019-08-03 16:08 GMT

ಹೊಸದಿಲ್ಲಿ, ಆ.3: ದೇಶಾದ್ಯಂತ ಪೌರರ ನೋಂದಣಿ ಪ್ರಕ್ರಿಯೆಗೆ ಬುನಾದಿಯಾಗಿ 2020ರೊಳಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪಟ್ಟಿಯನ್ನು ತಯಾರಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ.

   ಎನ್‌ಪಿಆರ್ ದೇಶದ ಸಾಮಾನ್ಯ ನಾಗರಿಕರ ವಿವರಗಳನ್ನು ಒಳಗೊಂಡಿರುತ್ತದೆ. ಕಳೆದ ಆರು ತಿಂಗಳುಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಒಂದು ಪ್ರದೇಶದಲ್ಲಿ ವಾಸಿಸಿರುವ ವ್ಯಕ್ತಿಯನ್ನು ಆ ಪ್ರದೇಶದ ನಿವಾಸಿಯೆಂದು ಎನ್‌ಪಿಆರ್‌ನಲ್ಲಿ ವ್ಯಾಖ್ಯಾನಿಸಲಾಗುತ್ತದೆ.

ಅಸ್ಸಾಂನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ)ಯ ಮಾದರಿಯಲ್ಲೇ ಭಾರತೀಯ ಪೌರರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಐಸಿ)ಯನ್ನು ತಯಾರಿಸಲಾಗುವುದು.

  ‘‘2003 ಪೌರತ್ವ (ಪೌರರ ನೋಂದಣಿ ಹಾಗೂ ರಾಷ್ಟ್ರೀಯ ಗುರುತುಚೀಟಿ ನೀಡಿಕೆ) ಕಾನೂನುಗಳ, ನಿಯಮ 3ರ ಉಪನಿಯಮ (4)ರ ಅನುಸಾರವಾಗಿ, ಕೇಂದ್ರ ಸರಕಾರವು ಜನಸಂಖ್ಯಾ ನೋಂದಣಿ ಪಟ್ಟಿಯನ್ನು ಸಿದ್ಧಪಡಿಸಲು ಹಾಗೂ ನವೀಕರಿಸಲು ನಿರ್ಧರಿಸಿದೆ. ಸ್ಥಳೀಯ ರಿಜಿಸ್ಟ್ರಾರ್‌ರ ವ್ಯಾಪ್ತಿಯೊಳಗೆ ಸಾಮಾನ್ಯವಾಗಿ ವಾಸವಾಗಿರುವ ಎಲ್ಲಾ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಕ್ಕಾಗಿ ಕ್ಷೇತ್ರಕಾರ್ಯವನ್ನು, 2020ರ ಎಪ್ರಿಲ್ 1ರಿಂದ 2020ರ ಸೆಪ್ಟೆಂಬರ್ 30ರೊಳಗೆ ನಡೆಸಲಾಗುವುದು’’ ಎಂದು ಪೌರತ್ವ ನೋಂದಣಿ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ವಿವೇಕ್ ಜೋಶಿ ತಿಳಿಸಿದ್ದಾರೆ.

ಎನ್‌ಪಿಆರ್‌ನಡಿ ಭಾರತದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯು ತನ್ನನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗುವುದು.

  ದೇಶದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯ ಸಮಗ್ರ ಗುರುತು ದತ್ತಾಂಶವನ್ನು ಸೃಷ್ಟಿಸುವುದು ಎನ್‌ಪಿಆರ್‌ನ ಉದ್ದೇಶವಾಗಿದೆ. ಈ ದತ್ತಾಂಶವು ಜನಸಂಖ್ಯಾತ್ಮಕ ಹಾಗೂ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿರುವುದು.

ಕಳೆದ ವರ್ಷದ ಜುಲೈ 30ರಂದು ಅಸ್ಸಾಂನಲ್ಲಿ ಎನ್‌ಆರ್‌ಸಿ ಕರಡು ಪ್ರಕಟಗೊಂಡಾಗ ಭಾರೀ ವಿವಾದ ತಲೆದೋರಿತ್ತು. ಅಸ್ಸಾಂನಲ್ಲಿ ವಾಸವಾಗಿರು ಸುಮಾರು 40.7 ಲಕ್ಷ ಜನರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಟ್ಟಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News