ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ವರದಿಯಲ್ಲಿನ ‘ಆಯ್ದ ಘಟನೆಗಳಿಂದ’ ನಿರಾಶೆ: ಭಾರತ

Update: 2019-08-03 16:25 GMT

ವಿಶ್ವಸಂಸ್ಥೆ, ಆ. 3: ಸಶಸ್ತ್ರ ಸಂಘರ್ಷವೂ ಅಲ್ಲದ, ಅಂತರ್‌ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೂ ಅಲ್ಲದ ಭಾರತದ ಘಟನೆಗಳನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇತ್ತೀಚಿನ ತನ್ನ ವರದಿಯಲ್ಲಿ ಸೇರಿಸಿರುವುದಕ್ಕೆ ಭಾರತ ತನ್ನ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದೆ.

‘ವರದಿಯ ವ್ಯಾಪ್ತಿಯನ್ನು ತನಗೆ ಬೇಕಾದ ರೀತಿಯಲ್ಲಿ’ ನಿರ್ದಿಷ್ಟ ಪರಿಸ್ಥಿತಿಗಳಿಗೆ ವಿಸ್ತರಿಸುವ ಪ್ರಯತ್ನವು ಕಾರ್ಯಸೂಚಿಯನ್ನು ರಾಜಕೀಕರಣಗೊಳಿಸುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

 ಗುಟೆರಸ್‌ರ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ಬಗ್ಗೆ ಮಹಾ ಕಾರ್ಯದರ್ಶಿಯ ವಾರ್ಷಿಕ ವರದಿ’ ಮಂಗಳವಾರ ಪ್ರಕಟಗೊಂಡಿತ್ತು. ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಮಕ್ಕಳು ಬಳಲುತ್ತಿರುವುದು ನಿರಂತರವಾಗಿ ಮುಂದುವರಿದಿದೆ ಎಂದು ವರದಿ ಹೇಳಿದೆ.

‘ಸಿಚುವೇಶನ್ಸ್ ನಾಟ್ ಆನ್ ದಿ ಅಜೆಂಡ ಆಫ್ ದ ಸೆಕ್ಯುರಿಟಿ ಕೌನ್ಸಿಲ್ ಆರ್ ಅದರ್ ಸಿಚುವೇಶನ್ಸ್’ ಎಂಬ ತಲೆಬರಹದ ಅಧ್ಯಾಯದಲ್ಲಿ ಭಾರತದ ಹೆಸರನ್ನು ಪ್ರಸ್ತಾಪಿಸಲಾಗಿದೆ.

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾರತದ ಪ್ರಥಮ ಕಾರ್ಯದರ್ಶಿಯಾಗಿರುವ ಪೌಲೊಮಿ ತ್ರಿಪಾಠಿ, ಶುಕ್ರವಾರ ಭದ್ರತಾ ಮಂಡಳಿಯಲ್ಲಿ ನಡೆದ ‘ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ’ ಕುರಿತ ಚರ್ಚೆಯ ವೇಳೆ ಭಾರತದ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.

ವಿಶ್ವಸಂಸ್ಥೆ ವ್ಯವಸ್ಥೆಗೆ ನೀಡಲಾಗಿರುವ ಆದೇಶದ ವಿಶ್ವಾಸಾರ್ಹ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಜಾರಿಯ ಮಹತ್ವದ ಬಗ್ಗೆ ಪೌಲೊಮಿ ಮಾತನಾಡಿದರು.

‘‘ಭದ್ರತಾ ಮಂಡಳಿಯ ಸ್ಪಷ್ಟ ಆದೇಶದ ಹೊರತಾಗಿಯೂ, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯು ತನ್ನ ವರದಿಯಲ್ಲಿ ಸಶಸ್ತ್ರ ಸಂಘರ್ಷವಲ್ಲದ ಹಾಗೂ ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಲ್ಲದ ಘಟನೆಗಳನ್ನು ಸೇರಿಸಿರುವುದಕ್ಕೆ ನಾವು ನಿರಾಶರಾಗಿದ್ದೇವೆ’’ ಎಂದು ಪೌಲೊಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News