ಭಾರತವನ್ನು ಗೆಲುವಿನ ಹೊಸ್ತಿಲಲ್ಲಿನಿಲ್ಲಿಸಿದ ಗೌತಮ್, ಮಾಯಾಂಕ್
ಪೋರ್ಟ್ ಆಫ್ ಸ್ಪೇನ್, ಆ.3: ಐದು ವಿಕೆಟ್ ಗೊಂಚಲು ಪಡೆದ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಹಾಗೂ 81 ರನ್ ಸಿಡಿಸಿದ ಮಾಯಾಂಕ್ ಅಗರ್ವಾಲ್ ವೆಸ್ಟ್‌ಇಂಡೀಸ್ ‘ಎ’ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ನಿಲ್ಲಿಸಿದ್ದಾರೆ.
ಆತಿಥೇಯ ವಿಂಡೀಸ್ ತಂಡ ನಾಲ್ಕನೇ ದಿನವಾದ ಶುಕ್ರವಾರ 4 ವಿಕೆಟ್‌ಗಳ ನಷ್ಟಕ್ಕೆ 12 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ಗೌತಮ್ ಸ್ಪಿನ್ ಮೋಡಿಗೆ ಸಿಲುಕಿದ ವಿಂಡೀಸ್ 2ನೇ ಇನಿಂಗ್ಸ್‌ನಲ್ಲಿ ಕೇವಲ 149 ರನ್‌ಗೆ ಆಲೌಟಾಯಿತು.
ಗೆಲ್ಲಲು 278 ರನ್ ಗುರಿ ಪಡೆದ ಭಾರತ ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿತು. ಗೆಲುವಿಗೆ ಇನ್ನೂ 93 ರನ್ ಗಳಿಸುವ ಅಗತ್ಯವಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ 2-0 ಅಂತರದಿಂದ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತ 28 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. 4ನೇ ವಿಕೆಟ್ ಜೊತೆಯಾಟದಲ್ಲಿ 150 ರನ್ ಸೇರಿಸಿದ ಪ್ರಿಯಾಂಕ್ ಪಾಂಚಾಲ್(68 ರನ್, 121 ಎಸೆತ) ಹಾಗೂ ಟೆಸ್ಟ್ ಆರಂಭಿಕ ಆಟಗಾರ ಅಗರ್ವಾಲ್(81, 134 ಎಸೆತ) ಭಾರತ ಎ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಇದಕ್ಕೂ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 12 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ ಪರ ಬ್ಯಾಟ್ಸ್‌ಮನ್ ಸುನೀಲ್ ಆ್ಯಂಬ್ರಿಸ್(71) ಹಾಗೂ ಜರ್ಮೈನ್ ಬ್ಲಾಕ್‌ವುಡ್(31)ಒಂದಷ್ಟು ಪ್ರತಿರೋಧ ಒಡ್ಡಿದರು. ಶಿವಂ ದುಬೆ ಈ ಜೋಡಿಯನ್ನು ಬೇರ್ಪಡಿಸಿದರು. ಭಾರತ ‘ಎ’ ತಂಡ ಗುರುವಾರ ಮೊದಲ ಇನಿಂಗ್ಸ್‌ನಲ್ಲಿ 190 ರನ್‌ಗೆ ಆಲೌಟಾಗಿತ್ತು. ದುಬೆ(79, 85 ಎಸೆತ) ಹಾಗೂ ಆರಂಭಿಕ ಆಟಗಾರ ಪ್ರಿಯಾಂಕ್ ಪಾಂಚಾಲ್(58, 125 ಎಸೆತ)6ನೇ ವಿಕೆಟ್‌ಗೆ 124 ರನ್ ಗಳಿಸಿ ಕುಸಿತದ ಹಾದಿಯಲ್ಲಿದ್ದ ಭಾರತದ ಬ್ಯಾಟಿಂಗ್‌ಗೆ ಆಸರೆಯಾದರು.
·
ಸಂಕ್ಷಿಪ್ತ ಸ್ಕೋರ್
<ವೆಸ್ಟ್‌ಇಂಡೀಸ್ ‘ಎ’: 318 ಹಾಗೂ 149 ರನ್‌ಗೆ ಆಲೌಟ್(ಆ್ಯಂಬ್ರಿಸ್ 71, ವಾರಿಯರ್ 3/43, ಕೆ.ಗೌತಮ್ 5/17)
<ಭಾರತ ‘ಎ’: 190/10 ಹಾಗೂ 50 ಓವರ್‌ಗಳಲ್ಲಿ 185/3(ಅಗರ್ವಾಲ್ 81, ಪಾಂಚಾಲ್ 68, ಹೋಲ್ಡರ್ 2-34)