×
Ad

ಐಟಿ ಇಲಾಖೆಯ ಕಿರುಕುಳದ ಬಗ್ಗೆ ಮಾತನಾಡದಂತೆ ‘ಸರಕಾರಿ ಅಧಿಕಾರಿ’ಯಿಂದ ಕರೆ: ಪ್ರಸಿದ್ಧ ಉದ್ಯಮಿ ಕಿರಣ್ ಮಜುಂದಾರ್

Update: 2019-08-04 12:42 IST

ಹೊಸದಿಲ್ಲಿ, ಆ.4: ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ ಸಾವಿನ ಬಳಿಕ ವ್ಯಾಪಕ ಚರ್ಚೆಯಾಗುತ್ತಿರುವ ಆದಾಯ ತೆರಿಗೆ ಇಲಾಖೆಯ ಕಿರುಕುಳದ ಬಗ್ಗೆ ಮಾತನಾಡದಂತೆ ‘ಸರಕಾರಿ ಅಧಿಕಾರಿ’ಯೊಬ್ಬರು ಕರೆ ಮಾಡಿ ತಿಳಿಸಿದ್ದಾರೆ ಎಂದು ಬಯೋಕಾನ್ ಮುಖ್ಯಸ್ಥೆ, ಪ್ರಸಿದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ತಿಳಿಸಿದ್ದಾರೆ.

telegraphindia.com ಜೊತೆ ಮಾತನಾಡಿದ ಅವರು, “ದಯವಿಟ್ಟು ಅಂತಹ ಹೇಳಿಕೆಗಳನ್ನು ನೀಡಬೇಡಿ. ಮೋಹನ್ ದಾಸ್ ಪೈ ಕೂಡ ನೀಡಬಾರದು. ನಾನು ಗೆಳೆಯನಾಗಿ ನಿಮಗೆ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಸರಕಾರಿ ಅಧಿಕಾರಿ ಹೇಳಿದರು” ಎಂದರು.

ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಅವರು ಕ್ವಿಂಟ್ ಜೊತೆ ಮಾತನಾಡಿದ್ದ ಸಂದರ್ಭ ಕಿರಣ್ ಮಜುಂದಾರ್  ರಿಗೆ ಇಂತಹ ಕರೆಗಳು ಬಂದಿತ್ತು ಎಂದು ತಿಳಿಸಿದ್ದರು.

ಕರೆಯು ಸಲಹೆಯಂತೆ ಇತ್ತೇ, ಅಥವಾ ಎಚ್ಚರಿಕೆಯಂತೆ ಇತ್ತೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಿರಣ್ ಮಜುಂದಾರ್, “ ಅದನ್ನು ಎರಡು ರೀತಿಯಲ್ಲೂ ಪರಿಗಣಿಸಬಹುದು” ಎಂದರು.

ಕೆಫೆ ಕಾಫಿ ಡೇ ಮಾಲಿಕ ವಿ.ಜಿ.ಸಿದ್ಧಾರ್ಥ ಅವರ ನಿಧನದ ಬಳಿಕ ತೆರಿಗೆ ಕಿರುಕುಳದ ಘಟನೆಗಳು ಪ್ರಮುಖವಾಗಿ ಚರ್ಚೆಯಾಗುತ್ತಿವೆ. ಸಿದ್ಧಾರ್ಥ ಅವರು ಸಾವಿಗೆ ಮುನ್ನ ಕಂಪನಿಯ ನಿರ್ದೇಶಕರ ಮಂಡಳಿಗೆ ಬರೆದಿದ್ದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆಯ ಮಾಜಿ ಮಹಾ ನಿರ್ದೇಶಕರು ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ತಿಳಿಸಿದ್ದರು.

  ಸರಕಾರಿ ಅಧಿಕಾರಿಯ ಕರೆಯನ್ನು ತಾನು ಸಲಹೆ ಮತ್ತು ಎಚ್ಚರಿಕೆ ಎರಡನ್ನೂ ಆಗಿ ಪರಿಗಣಿಸಿದ್ದೇನೆ ಎಂದ ಶಾ, ವೈಯಕ್ತಿವಾಗಿ ತನಗೆಂದೂ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಯಾರೂ ಯಾರದೇ ಬಾಯಿಯನ್ನು ಮುಚ್ಚಿಲ್ಲ. ನೀವು ಮಾತನಾಡಬೇಕೇ ಎನ್ನುವುದನ್ನು ನೀವು ಮಾತ್ರ ನಿರ್ಧರಿಸಬಲ್ಲಿರಿ. ನೀವು ನಿಮ್ಮ ತೆರಿಗೆಯನ್ನು ಪಾವತಿಸುತ್ತಿದ್ದರೆ ನಿಮಗೇಕೆ ಭಯ? ಕಾರ್ಪೊರೇಟ್ ಜಗತ್ತೇಕೆ ವೌನವಾಗಿದೆ ಎಂದು ಪ್ರಶ್ನಿಸಿದ್ದಾರೆ.

 ‘ಕಾರ್ಪೊರೇಟ್ ಜಗತ್ತು ವೌನವಾಗಿದ್ದರೆ ಕ್ರೋನಿ ಕ್ಯಾಪಿಟಲಿಸಮ್(ಸರಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಪರಸ್ಪರ ಲಾಭ ಮಾಡಿಕೊಳ್ಳುವ ಬಂಡವಾಳಶಾಹಿ)ನ ರೂಪವೊಂದನ್ನು ಪ್ರತಿಬಿಂಬಿಸುತ್ತದೆ ’ಎಂದೂ ಶಾ ಟ್ವೀಟಿಸಿದ್ದಾರೆ.

ಆಂಗ್ಲ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಪೈ,ಹಲವಾರು ಉದ್ಯಮಿಗಳಿಗೆ ಇಂತಹ ಕರೆಗಳು ಬರುತ್ತಿವೆ,ಯುಪಿಎ ಸರಕಾರವು ಅಧಿಕಾರದಲ್ಲಿದ್ದಾಗ ‘ತೆರಿಗೆ ಭಯೋತ್ಪಾದನೆ ’ಯು ಆರಂಭವಾಗಿತ್ತು,ಆದರೆ ಅದನ್ನು ಅಂತ್ಯಗೊಳಿಸಲು ಎನ್‌ಡಿಎ ಸರಕಾರವು ವಿಫಲಗೊಂಡಿದೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಈಗ ಬಂಧಿಸುವ ಅಧಿಕಾರವಿರುವುದರಿಂದ ನಮ್ಮ ಕಾನೂನುಗಳು ಬದಲಾಗುವ ಅಗತ್ಯವಿದೆ. ಅಂತಹ ಅಧಿಕಾರವು ಕಿರುಕುಳಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ಯುಪಿಎ-2 ಮತ್ತು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತೆರಿಗೆ ಅಧಿಕಾರಿಗಳಿಗೆ ಈ ಅಧಿಕಾರವನ್ನು ನೀಡಿದ್ದರು. ಇದು ರಾಜಕಾರಣಿಗಳು ಉದ್ಯಮಿಗಳೊಂದಿಗೆ ಮಾತುಕತೆ ನಡೆಸದೆ ಕೇವಲ ಅಧಿಕಾರಿಗಳ ಮಾತಿನಂತೆ ನಡೆದುಕೊಳ್ಳುವುದರ ಫಲಶ್ರುತಿಯಾಗಿದೆ ಎಂದಿದ್ದಾರೆ.

  ಯುಪಿಎ ಸರಕಾರವು ಮಾತ್ರ ಹೂಡಿಕೆದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸಲು ಪ್ರಯತ್ನಿಸಿತ್ತು. ಭಾರತವು ಐದು ದುರ್ಬಲ ಆರ್ಥಿಕತೆಗಳಲ್ಲೊಂದಾಗಿದೆ ಎಂದು ಘೋಷಿಸಲ್ಪಟ್ಟಿದ್ದಾಗ ಯುಪಿಎ-2 ಸರಕಾರವು ಕೆಲವು ಕ್ರಮಗಳನ್ನು ಕೈಗೊಂಡಿತ್ತು ಮತ್ತು ಅವು ಫಲ ನೀಡಿದ್ದವು ಎಂದಿರುವ ಪೈ,ಉದ್ಯಮಿಗಳಲ್ಲಿ ವಿಶ್ವಾಸವನ್ನು ಹೆಚ್ಚಿಸಲು ಮೋದಿ ಮತ್ತು ಇತರ ಸಚಿವರು ಅವರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿಯಾಗುವ ಅಗತ್ಯವಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News