ಚುನಾವಣೆ ಸಂದರ್ಭ ಖಾಸಗಿ ಇಂಜಿನಿಯರ್ ಗಳ ಕೈಯಲ್ಲಿ ಇವಿಎಂ: ಆರ್ ಟಿಐಯಿಂದ ಬಹಿರಂಗ!

Update: 2019-08-04 09:44 GMT

ಚುನಾವಣಾ ಪ್ರಕ್ರಿಯೆಗಳಲ್ಲಿ ಯಾವುದೇ ಖಾಸಗಿ ಕಂಪೆನಿಗಳಾಗಲೀ ಅಥವಾ ಹೊರಗಿನ ಯಾವುದೇ ಮೂಲಗಳಾಗಲೀ ಯಾವ ರೀತಿಯಲ್ಲೂ ಭಾಗಿಯಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಹೇಳುತ್ತಲೇ ಬಂದಿದೆ. ಆದರೆ thequint.com ನ ತನಿಖಾ ವರದಿಯೊಂದು ಇದನ್ನು ಸುಳ್ಳು ಎಂದು ನಿರೂಪಿಸಿದೆ.

ಇವಿಎಂಗಳು ಮತ್ತು ವಿವಿಪ್ಯಾಟ್ ಮೆಶಿನ್ ಗಳನ್ನು ತಯಾರಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿ. (ಇಸಿಐಎಲ್) ಖಾಸಗಿ ಇಂಜಿನಿಯರ್ ಗಳನ್ನು ‘ಸಲಹೆಗಾರರಾಗಿ’ ನೇಮಿಸಿತ್ತು ಮತ್ತು ಈ ಖಾಸಗಿ ಇಂಜಿನಿಯರ್ ಗಳು 2017ರಿಂದ ವಿಧಾನಸಭೆ ಚುನಾವಣೆಗಳಲ್ಲಿ ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗದೊಂದಿಗೆ ಕೆಲಸ ಮಾಡಿದ್ದರು ಎನ್ನುವುದನ್ನು ತೋರಿಸುವ ಆರ್ ಟಿಐ ದಾಖಲೆಗಳನ್ನು thequint.com ಸಂಗ್ರಹಿಸಿದೆ.

ಈ ಖಾಸಗಿ ಇಂಜಿನಿಯರ್ ಗಳ ಕೆಲಸವು ಅತ್ಯಂತ ಅತ್ಯಂತ ಸೂಕ್ಷ್ಮವಾಗಿದೆ. ಮೊದಲ ಹಂತದ ಪರಿಶೀಲನೆಯಿಂದ ಹಿಡಿದು ಮತ ಎಣಿಕೆಯ ದಿನದವರೆಗೆ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ಪರಿಶೀಲಿಸುವುದು ಮತ್ತು ನಿರ್ವಹಿಸುವುದು ಅವರ ಕೆಲಸವಾಗಿದೆ. ಅದರರ್ಥ ಚುನಾವಣೆ ನಡೆಯುವವರೆಗೆ ಇವಿಎಂಗಳ ಮೇಲೆ ಹಿಡಿತವಿರುತ್ತದೆ ಎನ್ನುವುದು!.

ಈ ಇಂಜಿನಿಯರ್ ಗಳು ಮುಂಬೈ ಮೂಲದ ಟಿ&ಎಂ ಸರ್ವಿಸಸ್ ಕನ್ಸಲ್ಟಿಂಗ್ ಪ್ರೈ.ಲಿ. ಎಂಬ ಖಾಸಗಿ ಕಂಪೆನಿಯವರು. ಆದರೆ ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದರೆ, “ಯಾವುದೇ ಖಾಸಗಿ ಕಂಪೆನಿ ಇಂಜಿನಿಯರ್ ಗಳನ್ನು ಪೂರೈಸಿಲ್ಲ” ಎಂದು ಹೇಳುತ್ತಿದೆ ಎಂದು thequint.com ವರದಿ ಮಾಡಿದೆ.

ಸ್ಪಷ್ಟವಾಗಿ ಚುನಾವಣಾ ಆಯೋಗವು ಮಾಹಿತಿಯನ್ನು ಅಡಗಿಸಿಡುತ್ತಿದೆ ಮತ್ತು ಜನರ ದಾರಿತಪ್ಪಿಸುತ್ತಿದೆ. ಯಾಕಾಗಿ?

ಚುನಾವಣಾ ಪ್ರಕ್ರಿಯೆಯಲ್ಲಿ ಖಾಸಗಿ ಇಂಜಿನಿಯರ್ ಗಳ ಪಾಲ್ಗೊಳ್ಳುವಿಕೆ ಬಗ್ಗೆ 2017ರ ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭ ಅಮಿತ್ ಅಹ್ಲುವಾಲಿಯಾ ಎಂಬ ವಕೀಲರೊಬ್ಬರು ಆರ್ ಟಿಐ ಮಾಹಿತಿ ಕೋರಿದ್ದರು.

“ಇಸಿಐಎಲ್ ಮ್ಯಾನ್ ಪವರ್ ಸಪ್ಲೈ ಏಜೆನ್ಸಿಯಾದ ಟಿ & ಎಂ ಸರ್ವಿಸಸ್ ಕನ್ಸಲ್ಟಿಂಗ್ ಪ್ರೈ.ಲಿ.ನಿಂದ ನುರಿತ ಮತ್ತು ಅರೆ ನುರಿತ ಸಲಹೆಗಾರರನ್ನು ಪಡೆಯುತ್ತದೆ” ಎಂದು ಇಸಿಐಎಲ್ ಆರ್ ಟಿಐ ಉತ್ತರದಲ್ಲಿ ತಿಳಿಸಿತ್ತು. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆ ಸಂದರ್ಭ ಸುಮಾರು 50 ಖಾಸಗಿ ಇಂಜಿನಿಯರ್ ಗಳನ್ನು ಇವಿಎಂಗಳ ಪರಿಶೀಲನೆಗಾಗಿ ಬಳಸಲಾಗಿತ್ತು ಮತ್ತು ಇಸಿಐಎಲ್ ನ ಕೇವಲ 8 ಉದ್ಯೋಗಿಗಳು ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು ಎಂದೂ ಇಸಿಐಲ್ ಸ್ಪಷ್ಟಪಡಿಸಿತ್ತು.

ಈ ಬಗ್ಗೆ ಕ್ವಿಂಟ್ ಕೆಲ ಇಂಜಿನಿಯರ್ ಗಳ ಜೊತೆ ಮಾತನಾಡಿದ್ದು, 2019ರ ಲೋಕಸಭಾ ಚುನಾವಣೆ ಸಂದರ್ಭವೂ ತಾವು ಕೆಲಸ ಮಾಡಿದ್ದೆವು ಎಂದವರು ಸ್ಪಷ್ಟಪಡಿಸಿದ್ದಾರೆ. ಅದೂ ಕೂಡ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ನಿರ್ವಹಿಸಲು (ಮತಎಣಿಕೆ ದಿನದವರೆಗೆ).

ಪಕ್ಷದ ಚಿಹ್ನೆಗಳು ಮತ್ತು ಅಭ್ಯರ್ಥಿಗಳ ಹೆಸರುಗಳಂತಹ ಸೂಕ್ಷ್ಮ ಮಾಹಿತಿಗಳನ್ನು ಇವಿಎಂಗಳಲ್ಲಿ ಮತ್ತು ವಿವಿಪ್ಯಾಟ್ ಗಳಿಗೆ ಅಪ್ಲೋಡ್ ಮಾಡುವುದು ಈ ಇಂಜಿನಿಯರ್ ಗಳ ಕೆಲಸ ಎನ್ನುವುದು ಗಮನಾರ್ಹ. ಇದಕ್ಕಾಗಿ ಚುನಾವಣೆಗಿಂತ 15 ದಿನಗಳವರೆಗೆ ಅವರು ಇವಿಎಂ ಮತ್ತು ವಿವಿಪ್ಯಾಟ್ ಗಳ ‘ಆ್ಯಕ್ಸೆಸ್’ ಹೊಂದಿರುತ್ತಾರೆ ಅರ್ಥಾತ್ ಅವುಗಳನ್ನು ನಿರ್ವಹಿಸುವ ಅಧಿಕಾರ ಈ ಇಂಜಿನಿಯರ್ ಗಳಿಗೆ ಇರುತ್ತದೆ.

► ಈ ಇಂಜಿನಿಯರ್ ಗಳನ್ನು ಚುನಾವಣಾ ಆಯೋಗವು ಸಂಪೂರ್ಣವಾಗಿ ಪರಿಶೀಲಿಸಿದೆಯೇ?... ನಮಗೆ ತಿಳಿದಿಲ್ಲ!

► ಈ ಇಂಜಿನಿಯರ್ ಗಳನ್ನು ನೀಡಿದ ಕಂಪೆನಿ ಟಿ & ಎಂ ಸರ್ವಿಸಸ್ ಕನ್ಸಲ್ಟಿಂಗ್ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸದೆಯೇ?... ನಮಗೆ ತಿಳಿದಿಲ್ಲ!

ಈ ವಿಚಾರದಲ್ಲಿ ಚುನಾವಣಾ ಆಯೋಗವು ಜನರನ್ನು ಮಾತ್ರವಲ್ಲ ಆಯೋಗದ ಮಾಜಿ ಮುಖ್ಯಸ್ಥರನ್ನೂ ದಾರಿ ತಪ್ಪಿಸಿದೆ ಎಂದು thequint.com ಆರೋಪಿಸಿದೆ.

2017ರ ವಿಧಾನಸಭಾ ಚುನಾವಣೆ ಸಂದರ್ಭ ಇವಿಎಂ ನಿರ್ವಹಣೆಯಂತಹ ಸೂಕ್ಷ್ಮ ಕೆಲಸಗಳನ್ನು ಹೊರಗಿನವರಿಗೆ ವಹಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು ಎಂದು ಮಾಜಿ ಚುನಾವಣಾ ಮುಖ್ಯ ಆಯುಕ್ತ ಡಾ.ಎಸ್.ವೈ. ಖುರೇಷಿ ದಿ ಕ್ವಿಂಟ್ ಜೊತೆ ಮಾತನಾಡುತ್ತಾ ತಿಳಿಸಿದ್ದರು. ತಾನು ಈ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಮಾತನಾಡಿದ್ದು, ಆಯೋಗದೊಳಗಿನ ಇಂಜಿನಿಯರ್ ಗಳು ಮಾತ್ರ ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ನಿರ್ವಹಿಸುತ್ತಾರೆ ಎಂದವರು ಭರವಸೆ ನೀಡಿದ್ದಾರೆ ಎಂದು ಖುರೇಷಿ ತಿಳಿಸಿದ್ದರು.

ಆದರೆ ಇದೀಗ ಆರ್ ಟಿಐ ಉತ್ತರ ಈ ಎಲ್ಲಾ ಹೇಳಿಕೆಗಳನ್ನು ಸುಳ್ಳಾಗಿಸಿದೆ!. ಇಷ್ಟು ಮಾತ್ರವಲ್ಲದೆ 2017ರ ವಿಧಾನಸಭೆ ಚುನಾವಣೆ ವೇಳೆ ಖಾಸಗಿ ಇಂಜಿನಿಯರ್ ಗಳನ್ನು ಬಳಸಲಾಗಿದೆ ಎಂದು ಇಸಿಐಲ್ ಸ್ವತಃ ಆರ್ ಟಿಐ ಉತ್ತರದಲ್ಲಿ ತಿಳಿಸಿದೆ. ಚುನಾವಣಾ ಆಯೋಗ ಹಾಗಾದರೆ ಸುಳ್ಳು ಹೇಳಿದ್ದೇಕೆ?.

ಕೃಪೆ: thequint.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News