ಕಾಶ್ಮೀರದಲ್ಲಿ ಎರಡು ಜಲವಿದ್ಯುತ್ ಕಾಮಗಾರಿ ಸ್ಥಗಿತಗೊಳಿಸಲು ಆಗ್ರಹಿಸಿ ಪಾಕ್ ನಿರ್ಣಯ
ಇಸ್ಲಾಮಾಬಾದ್,ಜ.21: ಜಮ್ಮು ಮತ್ತು ಕಾಶ್ಮೀರದಲ್ಲಿನ ಕಿಶನ್‌ಗಂಗಾ ಹಾಗೂ ರಾಟ್ಲೆ ಜಲ ವಿದ್ಯುತ್ ಯೋಜನೆಗಳ ಕಾಮಗಾರಿಯನ್ನು ಭಾರತವು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸುವ ಜಂಟಿ ನಿರ್ಣಯವನ್ನು ಪಾಕಿಸ್ತಾನದ ಎರಡು ಸಂಸದೀಯ ಸಮಿತಿಗಳು ರವಿವಾರ ಆಂಗೀಕರಿಸಿವೆಯೆಂದು ಪಾಕ್ ಸುದ್ದಿಸಂಸ್ಥೆ ಡಾನ್ ವರದಿ ಮಾಡಿದೆ.
ಭಾರತ ಹಾಗೂ ಪಾಕ್ ನಡುವೆ ನೆನೆಗುದಿಯಲ್ಲಿರುವ ಸಿಂಧೂ ಜಲ ಒಪ್ಪಂದದ ಕುರಿತ ವಿವಾದವನ್ನು ಬಗೆಹರಿಸಲು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ನ್ಯಾಯಾಲಯವನ್ನು ಸ್ಥಾಪಿಸಬೇಕೆಂದು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ವಿದೇಶಾಂಗ ವ್ಯವಹಾರ ಹಾಗೂ ಜಲ ಮತ್ತು ವಿದ್ಯುತ್ ಸಮಿತಿಗಳು ಅಂಗೀಕರಿಸಿದ ನಿರ್ಣಯ ತಿಳಿಸಿದೆ.
ಸಿಂಧೂ ಜಲ ಒಪ್ಪಂದದ ಅನ್ವಯ, ವಿವಾದ ಬಗೆಹರಿಸುವಲ್ಲಿ ವಿಶ್ವಬ್ಯಾಂಕ್ ವಿಳಂಬವಿಲ್ಲದೆ ಕಾರ್ಯಾಚರಿಸಬೇಕಾಗಿದೆಯೆಂದು ವರದಿಯು ತಿಳಿಸಿದೆ.
ಸಂಧಾನ ನ್ಯಾಯಾಲಯ ಸ್ಥಾಪನೆಯಾಗುವವರೆಗೆ, ರಾಟ್ಲೆ ಅಣೆಕಟ್ಟಿನ ಕಾಮಗಾರಿಯನ್ನು ನಡೆಸುವುದನ್ನ ತಕ್ಷಣವೇ ಸ್ಥಗಿತಗಳಿಸುವಂತೆ ವಿಶ್ವಬ್ಯಾಂಕ್ ಭಾರತದ ಮನವೊಲಿಸಬೇಕೆಂದು ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರನ್ನೊಳಗೊಂಡ ಸಮಿತಿಗಳು ಅವಿರೋಧವಾಗಿ ಅಂಗೀಕರಿಸಿದ ನಿರ್ಣಯವು ಹೇಳಿದೆ.
ಸಮಿತಿಗಳು ನಿರ್ಣಯ ಅಂಗೀಕರಿಸಿದ ಬಳಿಕ ಪಾಕ್ ವಿದೇಶಾಂಗ ಕಾರ್ಯದರ್ಶಿ ಐಝಾಜ್ ಚೌಧುರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತವು ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದಲ್ಲಿ ಪಾಕಿಸ್ತಾನಕ್ಕೆ ಎಲ್ಲಾ ಆಯ್ಕೆಗಳು ಲಭ್ಯವಿವೆಯೆಂದರು.
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ತನ್ನ ಹಕ್ಕನ್ನು ಇಸ್ಲಾಮಾಬಾದ್ ಎಷ್ಟೇ ಬೆಲೆ ತೆತ್ತಾದರೂ ರಕ್ಷಿಸಿಕೊಳ್ಳಲಿದೆಯೆಂದು ಅವರು ಹೇಳಿದು. ಸಿಂಧೂ ಜಲವಿವಾದವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಪಾಕ್ ಬಯಸುತ್ತಿದ್ದರೂ, ಭಾರತವು ವಿಳಂಬ ತಂತ್ರವನ್ನು ಅನುಸರಿಸುತ್ತಿದೆ ಎಂದರು.
ಭಾರತದ ಕಿಶನ್‌ಗಂಗಾ ಹಾಗೂ ರಾಟ್ಲೆ ಜಲವಿದ್ಯುತ್ ಯೋಜನೆಗಳನ್ನು ಪಾಕಿಸ್ತಾನವು ಅಂತಾರಾಷ್ಟ್ರೀಯ ಮಧ್ಯಸ್ತಿಕೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆಯೆಂದು ಪಾಕ್‌ನ ಜಲ ಹಾಗೂ ವಿದ್ಯುತ್ ಕಾರ್ಯದರ್ಶಿ ಯೂನಸ್ ದಗಾ ತಿಳಿಸಿದ್ದಾರೆ. ಆದಾಗ್ಯೂ ಭಾರತವು ರಾಟ್ಲೆ ಜಲವಿದ್ಯುತ್ ಯೋಜನೆಯ ಕಾಮಗಾರಿಯನ್ನು ಇನ್ನೂ ಆರಂಭಿಸಿಲ್ಲವೆಂದು ಅವರು ತಿಳಿಸಿದರು.