ಯುದ್ಧೋತ್ಸುಕ, ನಿರ್ಲಕ್ಷದ ವರ್ತನೆಗೆ ಈಗಿನ ಸನ್ನಿವೇಶ ಸಾಕ್ಷಿ: ಸಿಜೆಐ ಗೊಗೊಯಿ

Update: 2019-08-04 16:48 GMT

ಗುವಾಹಟಿ, ಆ.4: ಈಗಿನ ಸನ್ನಿವೇಶ ಕೆಲವು ವ್ಯಕ್ತಿಗಳ ಹಾಗೂ ಸಂಘಟನೆಗಳ ಯುದ್ಧೋತ್ಸುಕ ಹಾಗೂ ನಿರ್ಲಕ್ಷದ ವರ್ತನೆಗೆ ಸಾಕ್ಷಿಯಾಗುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ಹೇಳಿದ್ದಾರೆ.

  ಇವು ಕೇವಲ ಅಸಾಧಾರಣ ಬೆಳವಣಿಗೆಗಳಾಗಿದ್ದು ದೇಶದ ಕಾನೂನು ಸಂಸ್ಥೆಗಳ ಬಲಿಷ್ಟ ಪರಂಪರೆ, ಇತಿಹಾಸದ ಎದುರು ನಿಲ್ಲಲಾರದು , ಹಾಗೂ ಈ ಯುದ್ಧೋತ್ಸುಕ ಮೊಂಡುತನದ ವರ್ತನೆಯನ್ನು ಮಣಿಸುವ ಮನೋಭಾವವನ್ನು ದೇಶದ ನಿವಾಸಿಗಳು ಹೊಂದಿರುತ್ತಾರೆ ಎಂದವರು ಆಶಾವಾದ ವ್ಯಕ್ತಪಡಿಸಿದ್ದಾರೆ.

   ಗುವಾಹಟಿ ಹೈಕೋರ್ಟ್‌ನ ಸಭಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನ್ಯಾಯಾಲಯಗಳ ಕಾರ್ಯನಿರ್ವಹಣೆ ಸರಕಾರದ ಕಚೇರಿ ಹಾಗೂ ಇಲಾಖೆಗಳಿಗಿಂತ ಭಿನ್ನವಾಗಿದೆ. ಪ್ರತೀ ದಿನ ನ್ಯಾಯಾಂಗದ ಕಾರ್ಯಕಲಾಪಕ್ಕೆ ಸಂಬಂಧಿಸಿದ ಹಲವರು ಒಟ್ಟುಗೂಡಿ, ಯಾವುದೇ ಅಧಿಕಾರ ಶ್ರೇಣಿಯ ಮರ್ಜಿಗೆ ಕಾಯದೆ ನ್ಯಾಯದ ಚಕ್ರ ಮುಂದೆ ಚಲಿಸುವಂತೆ ಮಾಡುತ್ತಾರೆ ಎಂದವರು ಹೇಳಿದರು.

ನಮ್ಮ ಸಂಸ್ಥೆಯ ಆಧಾರವಾಗಿರುವ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವು ನ್ಯಾಯಾಲಯಗಳು ಹೊರಡಿಸಿದ ಆದೇಶ ಹಾಗೂ ತೀರ್ಪಿನ ಆಧಾರದಲ್ಲಿ ಲಭಿಸಿದೆ ಎಂಬುದನ್ನು ನ್ಯಾಯಾಧೀಶರು ಹಾಗೂ ನ್ಯಾಯಾಂಗದ ಅಧಿಕಾರಿಗಳು ಮರೆಯಬಾರದು . ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆಯಾಗುವುದು ಈ ಉತ್ಕೃಷ್ಟ ಸಂಸ್ಥೆಗೆ ಸೇವೆ ಸಲ್ಲಿಸಲು ದೊರಕಿದ ಅವಕಾಶ ಎಂದು ಪರಿಗಣಿಸಬೇಕು ಎಂದವರು ಕಿವಿ ಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News