ಜಮ್ಮು ಕಾಶ್ಮೀರದಿಂದ ತೆರಳುವಂತೆ ರಾಜ್ಯಾಡಳಿತ ಸೂಚನೆ: ಹಿಂದಿರುಗಿದ ಇರ್ಫಾನ್ ಪಠಾಣ್, ಕ್ರಿಕೆಟಿಗರು

Update: 2019-08-04 16:51 GMT

ಶ್ರೀನಗರ, ಆ. 4: ಜಮ್ಮು ಹಾಗೂ ಕಾಶ್ಮೀರದಲ್ಲಿ ಭದ್ರತಾ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ನಡೆಯುತ್ತಿರುವ ಅಂಡರ್ 16 ಹಾಗೂ ಅಂಡರ್ 19ರ ಆಯ್ಕೆ ಶಿಬಿರ ಮುಂದೂಡಿದ ಬಳಿಕ ಜಮ್ಮು ಹಾಗೂ ಕಾಶ್ಮೀರ ತಂಡದ ಮಾರ್ಗದರ್ಶಕರಾಗಿರುವ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕ್ರಿಕೆಟಿಗರೊಂದಿಗೆ ಮನೆಗೆ ಹಿಂದಿರುಗಿದ್ದಾರೆ.

ಸಂಭಾವ್ಯ ಭಯೋತ್ಪಾದಕ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಣಿವೆಯಿಂದ ತೆರಳುವಂತೆ ಎಲ್ಲ ಪ್ರವಾಸಿಗರು ಹಾಗೂ ಅಮರನಾಥ ಯಾತ್ರಿಗಳಿಗೆ ರಾಜ್ಯಾಡಳಿತ ಸಲಹೆ ನೀಡಿತ್ತು.

ಅಂಡರ್ 16 ಆಯ್ಕೆ (ವಿಜಯ್ ಮರ್ಚಂಟ್ ಟ್ರೋಫಿ) ಹಾಗೂ ಅಂಡರ್ 19 ಆಯ್ಕೆ (ಕೂಚ್ ಬೇರ್ ಟ್ರೋಫಿ)ಯ ಮೇಲ್ವಿಚಾರಣೆ ನೋಡಿಕೊಳ್ಳಲು ಹಾಗೂ ಸಂಭಾವ್ಯರ ಪಟ್ಟಿ ತಯಾರಿಸಲು ಪಠಾಣ್ ಕಾಶ್ಮೀರಕ್ಕೆ ತೆರಳಿದ್ದರು.

 ‘‘ಜೂನಿಯರ್ ತಂಡದ ಆಯ್ಕೆಯ ಎರಡನೇ ಹಂತವನ್ನು ನಾವು ಸ್ಪಲ್ಪ ಸಮಯಕ್ಕೆ ಮುಂದೂಡಿದ್ದೇವೆ. ನಮ್ಮ ಮೊದಲ ಹಂತ ಜೂನ್‌ನಿಂದ ಜುಲೈವರೆಗೆ ಇತ್ತು. ಇದು ಎರಡನೇ ಹಂತ. ಆದರೆ, ಸರಕಾರದ ಸಲಹೆಯ ಹಿನ್ನೆಲೆಯಲ್ಲಿ ನಾನು ಜಮ್ಮು ಹಾಗೂ ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ಸಿಇಒ ಬುಖಾರಿ ಹಾಗೂ ಆಡಳಿತಾಧಿಕಾರಿ ಜಸ್ಟಿಸ್ ಪ್ರಸಾದ್ ಅವರೊಂದಿಗೆ ಸಭೆ ನಡೆಸಿದ್ದೇನೆ. ಅದರಂತೆ ಬಾಲಕರನ್ನು ಮನೆಗೆ ಹಿಂದೆ ಕಳುಹಿಸಲು ನಿರ್ಧರಿಸಲಾಯಿತು’’ ಎಂದು ಪಠಾಣ್ ರವಿವಾರ ಹೇಳಿದ್ದಾರೆ.

ಜಮ್ಮುವಂತಹ ಇತರ ವಲಯಗಳ ಎಲ್ಲ ಬಾಲಕರು ತಮ್ಮ ಮನೆಗೆ ಹಿಂದಿರುಗಿದ ಬಳಿಕ ನಾನು ಶ್ರೀನಗರದಿಂದ ಹಿಂದಿರುಗಿದ್ದಾರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ‘‘ಬಾಲಕರ ಹೆತ್ತವರ ಆತಂಕವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಬಾಲಕರು ಮನೆಗೆ ತಲುಪಿರುವುದನ್ನು ಖಾತರಿಪಡಿಸಲು ನಾನು ಅವರ ಮನೆಗೆ ಕರೆ ಮಾಡಿ ವಿಚಾರಿಸಿದ್ದೇನೆ. ಈಗ ಪ್ರತಿಯೊಬ್ಬ ಬಾಲಕರೂ ಜಮ್ಮು ಹಾಗೂ ಕಾಶ್ಮೀರದಿಂದ ಹಿಂದಿರುಗಿದ್ದಾರೆ, ಇಂದು ನಾನು ಹಿಂದಿರುಗುತ್ತಿದ್ದೇನೆ’’ ಎಂದು ಪಠಾಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News