ಗುಪ್ತಚರ ವಿಭಾಗದ ಮುಖ್ಯಸ್ಥರ ಭೇಟಿಯಾದ ಅಮಿತ್ ಶಾ

Update: 2019-08-04 17:40 GMT

 ಹೊಸದಿಲ್ಲಿ, ಆ.4: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥ ಅರವಿಂದ್ ಕುಮಾರ್, ‘ರಾ’ದ ಸಮಂತ್ ಗೋಯೆಲ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

  ಪಾಕ್ ಬೆಂಬಲಿತ ಉಗ್ರರು ಜಮ್ಮು ಕಾಶ್ಮೀರದ ಗಡಿಯಲ್ಲಿ ಭಾರತದೊಳಗೆ ನುಸುಳಿ ಪುಲ್ವಾಮಾ ಆತ್ಮಾಹುತಿ ದಾಳಿಯ ರೀತಿಯಲ್ಲೇ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸುತ್ತಿದ್ದಾರೆ ಎಂಬ ವರದಿಯ ಮಧ್ಯೆಯೇ ಅಮಿತ್ ಶಾ ಗುಪ್ತಚರ ವಿಭಾಗದ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಪರಿಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಉಗ್ರರು ಭಾರತದೊಳಗೆ ನುಸುಳಲು ಜುಲೈ 29 ಮತ್ತು 31ರಂದು ಹಲವು ಪ್ರಯತ್ನ ನಡೆಸಿದ್ದರು. ಶನಿವಾರ ಗಡಿದಾಟಿ ಒಳಬಂದು ಕೇರಣ್ ವಿಭಾಗದ ಬಳಿಯಿರುವ ಸೇನಾನೆಲೆಯ ಮೇಲೆ ದಾಳಿ ನಡೆಸಲು ಮುಂದಾದ ಪಾಕಿಸ್ತಾನದ ಗಡಿ ಭದ್ರತಾ ತಂಡ(ಬಿಎಟಿ)ದ ಐವರು ಯೋಧರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

 ಈ ಮಧ್ಯೆ, ಅಮರನಾಥ ಯಾತ್ರಿಗಳು ಹಾಗೂ ಪ್ರವಾಸಿಗರು ಜಮ್ಮು ಕಾಶ್ಮೀರದಿಂದ ಹೊರ ತೆರಳಲು ಮುಂದಾಗಿರುವುದರಿಂದ ಏರ್‌ ಇಂಡಿಯಾವು ಶ್ರೀನಗರದಿಂದ ದಿಲ್ಲಿಗೆ ವಿಮಾನ ಪ್ರಯಾಣದ ದರವನ್ನು ಕಡಿಮೆಗೊಳಿಸಿದೆ. ಆಗಸ್ಟ್ 15ರವರೆಗೆ ಶ್ರೀನಗರ-ದಿಲ್ಲಿ ಮಾರ್ಗದ ಪ್ರಯಾಣಕ್ಕೆ ಗರಿಷ್ಟ 6,715 ರೂ. ಹಾಗೂ ದಿಲ್ಲಿ-ಶ್ರೀನಗರ ಮಾರ್ಗದಲ್ಲಿ ವಿಮಾನ ಪ್ರಯಾಣಕ್ಕೆ ಗರಿಷ್ಟ 6,899 ರೂ. ದರ ಇರುತ್ತದೆ ಎಂದು ಏರಿಂಡಿಯಾ ವಕ್ತಾರರು ಹೇಳಿದ್ದಾರೆ.

ರಾಜ್ಯದಲ್ಲಿ ತಂಗಿರುವ ಅಮರನಾಥ ಯಾತ್ರಿಗಳು ಮತ್ತು ಪ್ರವಾಸಿಗರು ಪ್ರವಾಸ ಮೊಟಕುಗೊಳಿಸಿ ವಾಪಾಸು ತೆರಳುವಂತೆ ಜಮ್ಮು ಕಾಶ್ಮೀರ ಆಡಳಿತ ಸೂಚಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ವಿಮಾನ ದರವನ್ನು ಕಡಿಮೆಗೊಳಿಸುವಂತೆ ನಾಗರಿಕ ವಿಮಾನ ಯಾನ ಸಚಿವಾಲಯ ಶನಿವಾರ ವಿಮಾನ ಸಂಸ್ಥೆಗಳಿಗೆ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News