ರೈಲ್ವೇ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು ಅಧಿಕಾರಿಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ

Update: 2019-08-04 17:46 GMT

  ಹೊಸದಿಲ್ಲಿ, ಆ.4: ದಿಲ್ಲಿಯಲ್ಲಿ ನಡೆಯುವ ರೈಲ್ವೇ ಮಂಡಳಿಯ ಎರಡು ಗಂಟೆಗಳ ಅವಧಿಯ ಸಭೆಯಲ್ಲಿ ಪಾಲ್ಗೊಳ್ಳಲು ನೈಋತ್ಯ ರೈಲ್ವೇ ವಲಯದ ಹಿರಿಯ ಅಧಿಕಾರಿಗಳು ಮೂರು ದಿನ ರೈಲಿನಲ್ಲಿ ಪ್ರಯಾಣಿಸಿ ದಿಲ್ಲಿಗೆ ತಲುಪುವ ಪರಿಸ್ಥಿತಿಯಿದೆ. ಆದ್ದರಿಂದ ಸಭೆಯಲ್ಲಿ ಪಾಲ್ಗೊಳ್ಳುವ ರೈಲ್ವೇ ಅಧಿಕಾರಿಗಳಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಬೇಕೆಂಬ ಪ್ರಸ್ತಾವಕ್ಕೆ ನೈಋತ್ಯ ರೈಲ್ವೇ ವಲಯ ಒಪ್ಪಿಗೆ ನೀಡಿದೆ.

  ನೈಋತ್ಯ ರೈಲ್ವೇ ವಲಯದಡಿ ಬರುವ ಯಾವುದೇ ಸ್ಥಳದಿಂದ ದಿಲ್ಲಿ/ಮುಂಬೈ/ಕೋಲ್ಕತ್ತಾ ನಗರಗಳಿಗೆ ರೈಲಿನಲ್ಲಿ ಪ್ರಯಾಣಿಸಲು 12 ಗಂಟೆಗೂ ಅಧಿಕ ಸಮಯ ಹಿಡಿಯುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಎಸಿ1, ಎಸಿ2 ಬೋಗಿಗಳಲ್ಲಿ ಪ್ರಯಾಣಿಸುವ ದರಕ್ಕಿಂತ ಖಾಸಗಿ ವಿಮಾನ ಯಾನ ದರ ಕಡಿಮೆಯಾಗಿರುತ್ತದೆ ಎಂದು ನೈಋತ್ಯ ರೈಲ್ವೇ ವಲಯದ ಉಪ ಪ್ರಧಾನ ವ್ಯವಸ್ಥಾಪಕರು ಹೇಳಿದ್ದಾರೆ.

 ರೈಲ್ವೇ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳುವ ವಲಯದ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ಕೋರಿ ನೈಋತ್ಯ ರೈಲ್ವೇ ವಲಯದ ಉಪ ಪ್ರಧಾನ ವ್ಯವಸ್ಥಾಪಕರು ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಈ ಪ್ರಸ್ತಾವಕ್ಕೆ ಆಗಸ್ಟ್ 1ರಂದು ಪ್ರಧಾನ ವ್ಯವಸ್ಥಾಪಕರು ಅನುಮೋದನೆ ನೀಡಿದ್ದಾರೆ.

 ರೈಲ್ವೇ ಮಂಡಳಿಯ ಸಭೆಯನ್ನು ಕೆಲವೊಮ್ಮೆ ತುರ್ತಾಗಿ ಆಯೋಜಿಸಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ವಿಮಾನದ ಮೂಲಕ ಪ್ರಯಾಣಿಸಿದರೆ ಸಭೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

  ರೈಲ್ವೇ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳ ಪ್ರಯಾಣ ವೆಚ್ಚವನ್ನು ಗಮನಿಸಿದರೆ ಅದಕ್ಕಿಂತ ವಿಮಾನ ಪ್ರಯಾಣದ ದರ ಅಗ್ಗವಾಗಿದೆ ಎಂದು ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರ(ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ. ಪ್ರಯಾಣದ ವೆಚ್ಚ ಹಾಗೂ ಪ್ರಯಾಣದ ಅವಧಿಯನ್ನು ಗಮನಿಸಿದರೆ 13 ವಲಯಗಳಲ್ಲಿ ವಿಮಾನ ದರ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

   ಇದೀಗ ಅಧಿಕಾರಿಗಳ ಉತ್ಪಾದಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತು ನೈಋತ್ಯ ವಲಯದ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಕ್ರಮವಾಗಿ ಜೆಎಸ್ ಹಂತದವರೆಗಿನ ಅಧಿಕಾರಿಗಳಿಗೆ ವಿಮಾನದಲ್ಲಿ ಹೋಗಿ ಬರಲು(ಸಭೆ ನಡೆಯುವ ಸ್ಥಳಕ್ಕೆ ರೈಲಿನಲ್ಲಿ ಸಂಚರಿಸುವ ಅವಧಿ 12 ಗಂಟೆಗೂ ಹೆಚ್ಚಿದ್ದರೆ) ಅನುಮತಿ ನೀಡಲಾಗಿದೆ ಎಂದು ನೈಋತ್ಯ ವಲಯದ ಜಿಎಂ ಅಜಯ್ ಕುಮಾರ್ ಸಿಂಗ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News