ನನಗೆ ಗೃಹಬಂಧನ ಸಾಧ್ಯತೆ, ಅಲ್ಲಾಹನೇ ಕಾಪಾಡಬೇಕು: ಒಮರ್ ಅಬ್ದುಲ್ಲಾ

Update: 2019-08-04 20:12 GMT

ಶ್ರೀನಗರ, ಆ. 5: ಕಾಶ್ಮೀರದಲ್ಲಿ ಕೇಂದ್ರ ಸರಕಾರ ಭಾರೀ ಸಂಖ್ಯೆಯಲ್ಲಿ ಸೇನಾ ನಿಯೋಜನೆ ಮಾಡಿರುವ ಬೆನ್ನಿಗೆ ಟ್ವೀಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ “ನನ್ನನ್ನು ರವಿವಾರ ಮಧ್ಯರಾತ್ರಿಯಿಂದ ಗೃಹ ಬಂಧನದಲ್ಲಿ ಇರಿಸುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.

ಅಮರನಾಥ ಯಾತ್ರಿಗಳು ಹಾಗು ರಾಜ್ಯದಲ್ಲಿರುವ ಎಲ್ಲಾ ಪ್ರವಾಸಿಗಳು ತಕ್ಷಣ ಜಮ್ಮು ಕಾಶ್ಮೀರದಿಂದ ವಾಪಸ್ ಹೋಗುವಂತೆ ಆದೇಶಿಸಿರುವ ಕೇಂದ್ರ ಸರಕಾರ ಅಲ್ಲಿ ಬಹು ದೊಡ್ಡ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಅಲ್ಲಲ್ಲಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರಕಾರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 35ಎ ಕಲಂಗೆ ಮಹತ್ವದ ತಿದ್ದುಪಡಿ ತರುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಡಿವೆ.

ಸೋಮವಾರ ಬೆಳಗ್ಗೆ ನಡೆಯುವ ಕೇಂದ್ರ ಸಂಪುಟ ಸಭೆಯ ಬಳಿಕ ಕಾಶ್ಮೀರ ಕುರಿತು ಮಹತ್ವದ ತೀರ್ಮಾನ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ “ ನನ್ನನ್ನು ಹಾಗು ಇತರ ಮುಖ್ಯವಾಹಿನಿಯ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗುವುದು ಎಂಬ ಸಂಶಯವಿದೆ. ಈ ಬಗ್ಗೆ ಖಚಿತ ಪಡಿಸಲು ಸಾಧ್ಯವಿಲ್ಲ. ಅಲ್ಲಾಹನೇ ನಮ್ಮನ್ನು ಕಾಪಾಡಬೇಕು” ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ಶಾಂತಿ ಕಾಪಾಡಿ ಎಂದು ಜನರಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News