×
Ad

ಸೋನ್‌ಭದ್ರ ಹತ್ಯೆ ಪ್ರಕರಣ: ಎಸ್ಪಿ, ಡಿಸಿ ಎತ್ತಂಗಡಿ

Update: 2019-08-05 09:41 IST
ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್

ಲಕ್ನೋ, ಆ.5: ಗೊಂಡ್ ಬುಡಕಟ್ಟು ಜನಾಂಗದವರ ಅಸಹಾಯಕ ಕರೆಗಳು, ಹಿಂಸೆ ಭುಗಿಲೇಳುವ ಬಗೆಗೆ ಮಾಹಿತಿ ಇದ್ದರೂ, ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠರು ವಿಫಲರಾಗಿದ್ದಾರೆ ಎಂದು ರಾಜ್ಯ ಸರ್ಕಾರ ನೇಮಿಸಿದ ತನಿಖಾ ಸಮಿತಿ ವರದಿ ನೀಡಿದ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಇಬ್ಬರು ಅಧಿಕಾರಿಗಳನ್ನು ವರ್ಗಾಯಿಸಿದೆ.

ಜುಲೈ 17ರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್ ಸರ್ಕಾರ ಇನ್ನಷ್ಟು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಪ್ರಕಟಿಸಿದೆ. ಗ್ರೌಂಡ್ ಝೀರೊ ಹಾಗೂ ಉಂಭಾದಲ್ಲಿ ಭೂಮಿ ಹೊಂದಿರುವ ಸಹಕಾರ ಸಂಘದ ಸದಸ್ಯರ ವಿರುದ್ಧವೂ ಭೂ ಕಬಳಿಕೆ ಪ್ರಕರಣ ದಾಖಲಿಸುವುದಾಗಿ ಹೇಳಿದೆ.

ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್, ಉಂಭಾ ಹಾಗೂ ಸಫಿ ಗ್ರಾಮಗಳ ವಿವಾದಿತ ಜಮೀನನ್ನು ಗ್ರಾಮಸಭೆಗಳ ಹೆಸರಿಗೆ ವರ್ಗಾಯಿಸಿ ನೋಂದಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದರು. 1959ರಿಂದೀಚೆಗೆ ಭೂಮಿಯನ್ನು ಪ್ರಭಾವಿ ವ್ಯಕ್ತಿಗಳು ಹೇಗೆ ಕಿತ್ತುಕೊಂಡಿದ್ದಾರೆ ಎಂಬ ತನಿಖೆಗೆ ವಿಶೇಷ ತಂಡ ರಚಿಸಲಾಗುವುದು. ಈ ತಂಡ ಮೂರು ತಿಂಗಳ ಒಳಗಾಗಿ ವರದಿ ಸಲ್ಲಿಸಲಿದೆ ಎಂದು ವಿವರಿಸಿದರು.

ಗ್ರಾಮಸ್ಥರ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಸೋನ್‌ಭದ್ರ ಜಿಲ್ಲಾಧಿಕಾರಿ ಅಂಕಿತ್ ಕುಮಾರ್ ಅಗರ್‌ವಾಲ್ ಹಾಗೂ ಎಸ್ಪಿ ಸಲ್ಮಾನ್ ತಾಜ್ ಪಟೇಲ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುವುದು. "ಜೀವಂತ ಇರುವ ಸರ್ಕಾರಿ ಅಧಿಕಾರಿಗಳಾಗಲೀ, ನಾಗರಿಕರಾಗಲೀ ಭೂಮಿ ಕಬಳಿಸಿರುವುದು ಕಂಡುಬಂದಲ್ಲಿ ಅಂಥವರು ಕ್ರಿಮಿನಲ್ ಮೊಕದ್ದಮೆ ಎದುರಿಸಲಿದ್ದಾರೆ" ಎಂದು ಗುಡುಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News