6 ವರ್ಷಗಳಲ್ಲೇ ಡಾಲರ್ ಎದುರು ಗರಿಷ್ಠ ಕುಸಿತ ಕಂಡ ರೂಪಾಯಿ

Update: 2019-08-05 17:51 GMT
PHOTO: thehindu.com

ಹೊಸದಿಲ್ಲಿ, ಆ.5: ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಪರಿಣಾಮ ರಾಜಕೀಯ ಅಸ್ಥಿರತೆಯ ಭೀತಿಯಿಂದ ಹಾಗೂ ಅಮೆರಿಕ- ಚೀನಾ ವ್ಯಾಪಾರ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯ ಕುಸಿತದೊಂದಿಗೆ ಭಾರತದ ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 418 ಅಂಕಗಳ ಕುಸಿತ ಕಂಡು 36,699ಕ್ಕೆ ಇಳಿದಿದೆ.

ಜೊತೆಗೆ, ಕಳೆದ 6 ವರ್ಷದಲ್ಲೇ ಭಾರತೀಯ ರೂಪಾಯಿ ಮೌಲ್ಯ 113 ಪೈಸೆಯಷ್ಟು ಇಳಿಕೆಯಾಗಿದ್ದು ಅಮೆರಿಕ ಡಾಲರ್ ಎದುರು 70.73 ರೂ.ಗೆ ಇಳಿದಿದೆ. ಕಳೆದ ಐದು ತಿಂಗಳಲ್ಲೇ ಇದು ಅತ್ಯಂತ ಕನಿಷ್ಟ ಮೌಲ್ಯವಾಗಿದೆ.

 ಚೀನಾದ ಕರೆನ್ಸಿ ಯುವಾನ್‌ನ ತೀವ್ರ ಅಪಮೌಲ್ಯೀಕರಣವೂ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದ್ದು ಸತತ ಮೂರನೇ ದಿನ ಭಾರತದ ರೂಪಾಯಿಯ ಮೌಲ್ಯ ಇಳಿಕೆಯಾಗಿದೆ. ಅಂತರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ಭಾರತದ ರೂಪಾಯಿ 70.20 ರೂ.ಯಲ್ಲಿ ವಹಿವಾಟು ಆರಂಭಿಸಿ ಡಾಲರ್ ಎದುರು 70.73 ರೂ.ಗೆ ಕುಸಿಯಿತು. ಬಳಿಕ 70.74ರಲ್ಲಿ ವಹಿವಾಟು ಮುಗಿಸಿದೆ. ಒಂದೇ ದಿನದಲ್ಲಿ ಇಷ್ಟೊಂದು ಪ್ರಮಾಣದ ಕುಸಿತ ಕಂಡಿರುವುದು 2013ರ ಆಗಸ್ಟ್ ಬಳಿಕ ಇದೇ ಮೊದಲ ಸಂದರ್ಭವಾಗಿದೆ.

 ಸ್ಟಾಕ್ ಮಾರುಕಟ್ಟೆ ಚಂಚಲಶೀಲತೆ ಶೇ.9ರಷ್ಟು ಹೆಚ್ಚಿದ್ದು 16.54ಕ್ಕೆ ತಲುಪಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವುದರಿಂದ ರಾಜಕೀಯ ಅಸ್ಥಿರತೆಯ ನಿರೀಕ್ಷೆ ಹಾಗೂ ಜಾಗತಿಕ ಮಟ್ಟದಲ್ಲಿ ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿರುವುದು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ ಎಂದು ರೆಲಿಗ್ಯಾರ್ ಬ್ರೋಕಿಂಗ್‌ನ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಸೆನ್ಸೆಕ್ಸ್ 418 ಅಂಕ ಕುಸಿದು 36,999ಕ್ಕೆ ತಲುಪಿದರೆ ನಿಫ್ಟಿ ಶೇ.1.2ರಷ್ಟು ಕುಸಿದು 10,862 ಅಂಕ ತಲುಪಿದೆ. ನಿಫ್ಟಿ ದಿನದ ಗರಿಷ್ಟ ಮತ್ತು ಕನಿಷ್ಟ ಮಟ್ಟ ಅನುಕ್ರಮವಾಗಿ 10895.80 ಮತ್ತು 10,782.60 ಆಗಿದೆ. ಇತರ ಏಶ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಯಲ್ಲೂ ವಹಿವಾಟು ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News