‘ಅತ್ಯಂತ ಅಪಾಯಕಾರಿ ಪರಿಸ್ಥಿತಿ’ಯಲ್ಲಿ ಹಾಂಕಾಂಗ್: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್
ಹಾಂಕಾಂಗ್, ಆ. 5: ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ‘ಅತ್ಯಂತ ಅಪಾಯಕಾರಿ ಪರಿಸ್ಥಿತಿ’ಯೊಂದನ್ನು ಸೃಷ್ಟಿಸುವ ಹಂತದಲ್ಲಿದ್ದಾರೆ ಎಂದು ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರೀ ಲ್ಯಾಮ್ ಸೋಮವಾರ ಎಚ್ಚರಿಸಿದ್ದಾರೆ.
ಜಾಗತಿಕ ಆರ್ಥಿಕ ಕೇಂದ್ರ (ಹಾಂಕಾಂಗ್)ದಲ್ಲಿ ರೈಲು ಸಂಚಾರ ಮತ್ತು ವಿಮಾನ ಹಾರಾಟದಲ್ಲಿ ಅಸ್ಥಿರತೆ ಕಂಡು ಬಂದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾರೀ ಲ್ಯಾಮ್, ಹೆಚ್ಚುತ್ತಿರುವ ಒತ್ತಡಕ್ಕೆ ಅಧಿಕಾರಿಗಳು ತಲೆಬಾಗುವುದಿಲ್ಲ ಎಂದರು.
‘‘ಅವರು ಹಾಂಕಾಂಗ್‌ನ ಕಾನೂನು ಮತ್ತು ವ್ಯವಸ್ಥೆಯನ್ನು ಗಣನೀಯವಾಗಿ ದುರ್ಬಲಗೊಳಿಸಿದ್ದಾರೆ ಹಾಗೂ ನಾವೆಲ್ಲರೂ ಪ್ರೀತಿಸುವ ಈ ನಗರವನ್ನು ಅಪಾಯಕಾರಿ ಸ್ಥಿತಿಯೊಂದಕ್ಕೆ ತಳ್ಳುತ್ತಿದ್ದಾರೆ’’ ಎಂದು ಲ್ಯಾಮ್ ನುಡಿದರು.
ಪ್ರತಿಭಟನಕಾರರು ‘ಕ್ರಾಂತಿ’ ಎಂದು ಘೋಷಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ಇದು ‘ಒಂದು ದೇಶ, ಎರಡು ವ್ಯವಸ್ಥೆ’ ನೀತಿಗೆ ವಿರುದ್ಧವಾಗಿದೆ ಎಂದರು.
100ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು
ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಪರ ಹೋರಾಟಗಾರರು ನಗರ ವ್ಯಾಪಿ ಮುಷ್ಕರವನ್ನು ಸೋಮವಾರ ಆರಂಭಿಸಿದ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಅಧಿಕಾರಿಗಳು ಸೋಮವಾರ ಬೆಳಗ್ಗೆ 100ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಿದ್ದಾರೆ.
ಆದರೆ, ಹಾರಾಟ ರದ್ದತಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡಲಿಲ್ಲ.