ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ಪಂದ್ಯಕ್ಕೆ ಭಾರತ ತಂಡ ಪ್ರಕಟ

Update: 2019-08-05 18:05 GMT

ಹೊಸದಿಲ್ಲಿ, ಆ.5: ಅಖಿಲ ಭಾರತ ಟೆನಿಸ್ ಸಂಸ್ಥೆಯ(ಎಐಟಿಎ)ಆಯ್ಕೆ ಸಮಿತಿಯು ಪಾಕಿಸ್ತಾನಕ್ಕೆ ಗ್ರೂಪ್-1 ಪಂದ್ಯವನ್ನು ಆಡಲು ಪ್ರಯಾಣ ಬೆಳೆಸಲಿರುವ ಭಾರತೀಯ ಡೇವಿಸ್ ಕಪ್ ತಂಡವನ್ನು ಪ್ರಕಟಿಸಿದೆ. ಭಾರತ ತಂಡಕ್ಕೆ ವಾಪಸಾಗಿರುವ ಸಾಕೇತ್ ಮೈನೇನಿ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ.

   ಅಗ್ರ ಸಿಂಗಲ್ಸ್ ಹಾಗೂ ಡಬಲ್ಸ್ ಆಟಗಾರರು ನಿರೀಕ್ಷೆಯಂತೆಯೇ ಆಯ್ಕೆಯಾಗಿರುವ ಕಾರಣ ತಂಡದಲ್ಲಿ ಅಚ್ಚರಿಯ ಆಯ್ಕೆ ಇರಲಿಲ್ಲ್ಲ. ಪ್ರಜ್ಞೇಶ್ ಗುಣೇಶ್ವರನ್ ಹಾಗೂ ರಾಮ ಕುಮಾರ್ ರಾಮನಾಥನ್ ಸಿಂಗಲ್ಸ್ ಸವಾಲನ್ನು ಮುನ್ನಡೆಸಲಿದ್ದಾರೆ. ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಹುಲ್ಲುಹಾಸಿನ ಅಂಗಣದಲ್ಲಿ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ. ಡೇವಿಸ್ ಕಪ್ ಪಂದ್ಯ ಸೆ.14-15 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ.

ಸುಮಿತ್ ನಗಾಲ್ ಗಾಯದ ಸಮಸ್ಯೆಯ ಕಾರಣದಿಂದ ಟೂರ್ನಿಗೆ ಅಲಭ್ಯ ಎಂದು ಹೇಳಿರುವ ಹಿನ್ನೆಲೆಯಲ್ಲಿ ರೋಹಿತ್ ರಾಜ್‌ಪಾಲ್ ನೇತೃತ್ವದ ಐವರು ಸದಸ್ಯರ ಆಯ್ಕೆ ಸಮಿತಿಯು ಮೈನೇನಿ ಅವರನ್ನು ಆಯ್ಕೆ ಮಾಡಿದೆ.

 ಯುವ ಹಾಗೂ ಪ್ರತಿಭಾವಂತ ಆಟಗಾರ ಸಸಿ ಕುಮಾರ್ ಮುಕುಂದ್ ಮೀಸಲು ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ರಾಜ್‌ಪಾಲ್ ಹಾಗೂ ಬಲರಾಮ್ ಸಿಂಗ್ ಸಭೆಯಲ್ಲಿ ಹಾಜರಿದ್ದರು. ಝೀಶಾನ್ ಅಲಿ ಹಾಗೂ ನಂದನ್ ಬಾಲಾ ಟೆಲಿ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದರು.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಇಟಲಿಯಲ್ಲಿ ನಡೆದ ಡೇವಿಸ್ ಕಪ್ ಪಂದ್ಯದಲ್ಲಿ ಮೈನೇನಿ ಭಾರತ ತಂಡದಲ್ಲಿ ಆಡಿರಲಿಲ್ಲ. ಆ ಪಂದ್ಯವನ್ನು ಭಾರತ 1-3 ಅಂತರದಿಂದ ಸೋತಿತ್ತು. ಭಾರತ 2018ರ ಸೆಪ್ಟಂಬರ್‌ನಲ್ಲಿ ವರ್ಲ್ಡ್‌ಗ್ರೂಪ್ ಪ್ಲೇ-ಆಫ್‌ಗೆ ಸರ್ಬಿಯಕ್ಕೆ ತೆರಳಿದ ಸಂದರ್ಭದಲ್ಲಿ ಭಾರತದ ಪರ ಮೈನೇನಿ ಕೊನೆಯ ಬಾರಿ ಆಡಿದ್ದರು. ಆಗ ಬೋಪಣ್ಣ ಜೊತೆ ಡಬಲ್ಸ್ ಪಂದ್ಯ ಆಡಿದ್ದ ಮೈನೇನಿ, ನಿಕೊಲಾ ಮಿಲೊಜೆವಿಕ್ ಹಾಗೂ ಡಾನಿಲೊ ಪೆಟ್ರೊವಿಕ್ ವಿರುದ್ಧ ಸೋತಿದ್ದರು.

 31ರ ಹರೆಯದ ಮೈನೇನಿ ಕಳೆದ ವಾರ ಸಹ ಆಟಗಾರ ಅರ್ಜುನ್ ಖಡೆ ಜೊತೆಗೂಡಿ ಚೆಂಗ್ಡು ಚಾಲೆಂಜರ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಆದರೆ, ಈ ಋತುವಿನಲ್ಲಿ ಸಿಂಗಲ್ಸ್‌ನಲ್ಲಿ ಮಹತ್ವದ ಸಾಧನೆ ಮಾಡಿಲ್ಲ. ಚಾಲೆಂಜರ್ ಟೂರ್‌ನ 14 ಟೂರ್ನಿಗಳ ಪೈಕಿ ಕೇವಲ ಒಂದು ಬಾರಿ(ಜೆರುಸಲೇಂ)ಮಾತ್ರ ಸೆಮಿ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧ ಈತನಕ ಆರು ಡೇವಿಸ್ ಕಪ್ ಪಂದ್ಯಗಳನ್ನು ಆಡಿದ್ದ ಭಾರತ ಒಂದೂ ಪಂದ್ಯದಲ್ಲಿ ಸೋಲದೆ ಅಜೇಯ ದಾಖಲೆ ಕಾಯ್ದುಕೊಂಡಿದೆ. ಎಟಿಪಿ ಪಟ್ಟಿಯಲ್ಲಿ ರ್ಯಾಂಕ್ ಪಡೆದ ಆಟಗಾರರು ಪಾಕ್‌ನ ಸಿಂಗಲ್ಸ್ ವಿಭಾಗದಲ್ಲಿಲ್ಲ. ಹೀಗಾಗಿ ಭಾರತ ಮೇಲುಗೈ ಸಾಧಿಸುವುದು ಖಚಿತವಾಗಿದೆ.

 ಭಾರತದ ಪ್ರಜ್ಞೇಶ್ ವಿಶ್ವದ 90ನೇ ರ್ಯಾಂಕಿನಲ್ಲಿದ್ದು, ರಾಮ್‌ಕುಮಾರ್ 184ನೇ ಸ್ಥಾನದಲ್ಲಿದ್ದಾರೆ. ಮೈನೇನಿ 271ನೇ ರ್ಯಾಂಕಿನಲ್ಲಿದ್ದಾರೆ. ಪಾಕ್‌ನ ಐಸಾಮ್ ವುಲ್ ಹಕ್ ಕುರೇಶಿ ಡಬಲ್ಸ್‌ನಲ್ಲಿ 55ನೇ ರ್ಯಾಂಕಿನಲ್ಲಿದ್ದಾರೆ. ಬೋಪಣ್ಣ ಹಾಗೂ ಖುರೇಶಿ ಒಂದು ಕಾಲದಲ್ಲಿ ಯಶಸ್ವಿ ಡಬಲ್ಸ್ ಜೋಡಿಯಾಗಿದ್ದರು. ಮಾಧ್ಯಮಗಳು ಇವರನ್ನು ‘ಭಾರತ-ಪಾಕ್ ಎಕ್ಸ್‌ಪ್ರೆಸ್ ’ ಜೋಡಿ ಎಂದು ಕರೆಯುತ್ತಿದ್ದವು. ಈ ಇಬ್ಬರು 2010ರಲ್ಲಿ ಅಮೆರಿಕ ಓಪನ್ ಫೈನಲ್‌ಗೆ ತಲುಪಿದ್ದರು. ಬ್ರಿಯಾನ್ ಬ್ರದರ್ಸ್‌ಗಳಾದ ಮೈಕ್ ಹಾಗೂ ಬಾಬ್ ವಿರುದ್ಧ ಸೋತಿದ್ದರು.

ಭಾರತದ ಡೇವಿಸ್ ಕಪ್ ತಂಡ

► ಪ್ರಜ್ಞೇಶ್ ಗುಣೇಶ್ವರನ್, ರಾಮಕುಮಾರ್ ರಾಮನಾಥನ್, ಸಾಕೇತ್ ಮೈನೇನಿ, ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್

► ನಾಯಕ: ಮಹೇಶ್ ಭೂಫತಿ

► ಕೋಚ್: ಝಿಶಾನ್ ಅ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News