×
Ad

ಡಬಲ್ಸ್ ಪ್ರಶಸ್ತಿ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ: ಚಿರಾಗ್

Update: 2019-08-05 23:39 IST

ಹೊಸದಿಲ್ಲಿ, ಆ.5: ‘‘ಇದು ನಮ್ಮಿಬ್ಬರ ಇದುವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ. ಎರಡು ತಿಂಗಳುಗಳಲ್ಲಿ ಎರಡನೇ ಬಾರಿ ಚೀನಾ ಆಟಗಾರರನ್ನು ಎದುರಿಸಿದ್ದೇವೆ. ಜೂನ್ ಮೊದಲ ವಾರದಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾವು ಸೋತಿದ್ದೆವು. ಈ ಬಾರಿ ನಾವು ಹಳೆಯ ತಪ್ಪು ಮಾಡಲಿಲ್ಲ. ಶಾಂತಚಿತ್ತದಿಂದ ಪಂದ್ಯದತ್ತ ಹೆಚ್ಚು ಗಮನ ನೀಡಿದೆವು. ಇದು ಕಾರ್ಯಗತವಾಯಿತು. ನಮ್ಮ ಯಶಸ್ಸಿಗೆ ಇಡೀ ಬ್ಯಾಡ್ಮಿಂಟನ್ ಸಮುದಾಯ ಶುಭಾಶಯ ಕೋರಿದಾಗ ತುಂಬಾ ಸಂತೋಷವಾಯಿತು. ನಾವು ಭಾರತಕ್ಕೆ ತಲುಪಿದ ಬಳಿಕ ಪ್ರತಿಯೊಬ್ಬರೂ ಶುಭಾಶಯ ಕೋರಿ, ಪ್ರಶಂಸಿಸಿದರು. ಪ್ರಶಸ್ತಿ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ’’ ಎಂದು ಭಾರತದ ಡಬಲ್ಸ್ ಆಟಗಾರ ಚಿರಾಗ್ ಶೆಟ್ಟಿ ಹೇಳಿದ್ದಾರೆ.

ಈ ಬಾರಿ ವಿಶ್ವ ಚಾಂಪಿಯನ್ನರ ವಿರುದ್ದ ಯಾವ ಯೋಜನೆ ಹಾಕಿಕೊಂಡು ಸ್ಪರ್ಧಾ ಕಣಕ್ಕಿಳಿದಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಚಿರಾಗ್,‘‘ಅವರನ್ನು(ಚೀನಾ ಜೋಡಿ)ಮಣಿಸುವುದು ತುಂಬಾ ಕಠಿಣ. ಶಟ್ಲ್ ಕೆಳಗಿರಲಿ. ನೆಟ್‌ನಲ್ಲಿ ವೇಗವಾಗಿರಿ ಎಂದು ನಮ್ಮ ಕೋಚ್ ಸಲಹೆ ನೀಡಿದ್ದರು. ಇದೊಂದು ಯೋಜನೆಯಾಗಿತ್ತು’’ ಎಂದು ಹೇಳಿದ್ದಾರೆ.

 ‘‘ನಾವು ಫೈನಲ್ ಪಂದ್ಯದ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ಅಲ್ಲಿಗೆ ತೆರಳಿ ಆಡಬೇಕೆಂದು ಬಯಸಿದ್ದೆವು. ನಾವು ಚೀನಾ ಆಟಗಾರರ ಪಂದ್ಯವನ್ನು ವಿಡಿಯೋದಲ್ಲಿ ವೀಕ್ಷಿಸಿದ್ದೆವು. ಕ್ರಮಬದ್ಧವಾಗಿ ಯೋಜನೆ ರೂಪಿಸಿದ್ದೆವು’’ ಎಂದು ಮುಂಬೈನಲ್ಲಿ ಜನಿಸಿರುವ 22ರ ಹರೆಯದ ಚಿರಾಗ್ ಹೇಳಿದ್ದಾರೆ.

ಆಗಸ್ಟ್ 13 ರಂದು 19ನೇ ವಯಸ್ಸಿಗೆ ಕಾಲಿಡಲಿರುವ ಸಾತ್ವಿಕ್‌ಸಾಯಿರಾಜ್‌ಗೆ ಥಾಯ್ಲೆಂಡ್ ಓಪನ್ ಪ್ರಶಸ್ತಿಯು ಮುಂಗಡ ಬರ್ತ್ ಡೇ ಗಿಫ್ಟ್ ಆಗಿದೆ. ನಾವು ಪ್ರಶಸ್ತಿ ಜಯಿಸಿದಾಗ, ನಾನು ಆತನಲ್ಲಿ(ಸಾತ್ವಿಕ್)ಮುಂಗಡವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದೆ. ನನ್ನ ವೃತ್ತಿಜೀವನವನ್ನು ರೂಪಿಸಿರುವ ರಾಷ್ಟ್ರೀಯ ಕೋಚ್ ಪಿ.ಗೋಪಿಚಂದ್‌ಗೆ ಎಲ್ಲ ಶ್ರೇಯಸ್ಸು ಸಲ್ಲಲಿದೆ. ಪ್ರಶಸ್ತಿ ಜಯಿಸಿದ ಬಳಿಕ ಗೋಪಿಚಂದ್ ಸರ್, ನಮ್ಮಿಬ್ಬರಿಗೂ ಅಭಿನಂದನೆ ತಿಳಿಸಿದ್ದಾರೆ. ಅವರೊಬ್ಬ ಅದ್ಭುತ ಕೋಚ್. ಎಲ್ಲ ಬ್ಯಾಡ್ಮಿಂಟನ್ ಆಟಗಾರರು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಪ್ರಶಸ್ತಿ ಗೆದ್ದ ಬಳಿಕ ನಮ್ಮಿಬ್ಬರ ಬೆನ್ನುತಟ್ಟಿದ ಅವರು,‘‘ಇದು ಹಲವು ಪ್ರಶಸ್ತಿಗಳ ಪೈಕಿ ಒಂದಾಗಿದೆ. ಒಂದು ಅಥವಾ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಿರಿ. ಆ ಬಳಿಕ ವಿಶ್ವ ಚಾಂಪಿಯನ್‌ಶಿಪ್‌ಗೆ ಸಜ್ಜಾಗಿ’’ ಎಂದು ಸಲಹೆ ನೀಡಿದ್ದಾಗಿ ಚಿರಾಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News