×
Ad

ಹಸಿರು ಕಾರಿಡಾರ್, ವಿಮಾನ ಮೂಲಕ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಏಮ್ಸ್‌ಗೆ ದಾಖಲು

Update: 2019-08-06 09:13 IST

ಹೊಸದಿಲ್ಲಿ/ ಲಕ್ನೋ: ಕಿಂಗ್ ಜಾರ್ಜ್ ವೈದ್ಯಕೀಯ ವಿವಿ ಆಸ್ಪತ್ರೆಯ ಅಪಘಾತ ಚಿಕಿತ್ಸಾ ವಿಭಾಗದಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯನ್ನು ಸೋಮವಾರ ಸಂಜೆ ಹೊಸದಿಲ್ಲಿಯ ಎಐಐಎಂಎಸ್‌ಗೆ ವಿಮಾನ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಸಂತ್ರಸ್ತೆಯನ್ನು ತ್ವರಿತವಾಗಿ ಕರೆದೊಯ್ಯಲು ಅನುಕೂಲವಾಗುವಂತೆ ಲಕ್ನೋ ಹಾಗೂ ದೆಹಲಿಯಲ್ಲಿ ಹಸಿರು ಕಾರಿಡಾರ್ ಸೃಷ್ಟಿಸಲಾಗಿತ್ತು. ಜುಲೈ 28ರಂದು ರಾಯಬರೇಲಿಯಲ್ಲಿ ನಡೆದ ಅಪಘಾತದಲ್ಲಿ ಈಕೆ ಹಾಗೂ ಈಕೆಯ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು. ರಾತ್ರಿ 9ರ ವೇಳೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಆ್ಯಂಬುಲೆನ್ಸ್ ಬಂದಿಳಿಯಿತು.

ಕೇವಲ 18 ನಿಮಿಷಗಳಲ್ಲಿ ಎಐಐಎಂಎಸ್‌ಗೆ ತಲುಪಿದ್ದು, ಅಪಘಾತ ಚಿಕಿತ್ಸಾ ಘಟಕದ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೂ ಮುನ್ನ 39 ನಿಮಿಷಗಳಲ್ಲಿ ಲಕ್ನೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಚೌಧರಿ ಚರಣ್‌ಸಿಂಗ್ ಆಸ್ಪತ್ರೆಗೆ 39 ನಿಮಿಷಗಳಲ್ಲಿ ಕರೆದೊಯ್ಯಲಾಗಿತ್ತು.

22 ಕ್ರಾಸಿಂಗ್‌ಗಳುದ್ದಕ್ಕೂ ಹಸಿರು ಕಾರಿಡಾರ್ ಸೃಷ್ಟಿಸುವ ಸಲುವಾಗಿ 150 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಲಕ್ನೋ ಜಿಲ್ಲಾಧಿಕಾರಿ ಕೌಶಲ್‌ರಾಜ್ ಶರ್ಮಾ ಹೇಳಿದ್ದಾರೆ.

ಸಂತ್ರಸ್ತೆಯ ವಕೀಲರನ್ನು ಮಂಗಳವಾರ ಎಐಐಎಂಎಸ್‌ಗೆ ಸಾಗಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಚಿಕಿತ್ಸೆ ಸಲುವಾಗಿ ಎಐಐಎಂಎಸ್‌ಗೆ ಸಾಗಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ನೀಡಿದ ತೀರ್ಪಿಗೆ ಅನುಗುಣವಾಗಿ ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ ಬಳಿಕ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News