ಪಡುಬಿದ್ರೆ : ಭಾರೀ ಮಳೆಯಿಂದ ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬಕ್ಕೆ ಹಾನಿ

Update: 2019-08-06 07:33 GMT

ಕಾಪು : ತಾಲೂಕಿನಲ್ಲಿ ಬೆಳಗ್ಗಿನ ಜಾವ ಸುರಿದ ಭಾರೀ ಗಾಳಿ, ಮಳೆಗೆ ಇಲ್ಲಿನ ಪಡುಬಿದ್ರೆ, ಕಾಪು ಹಾಗೂ ಉಚ್ಚಿಲದಲ್ಲಿ ಅಪಾರ ಹಾನಿಯಾಗಿದೆ.

ಪಡುಬಿದ್ರೆಯಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಉಚ್ಚಿಲ ಬಡಾ ಗ್ರಾಮ ಪಂ. ವ್ಯಾಪ್ತಿಯ ಕಟ್ಟಿಂಗೇರಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಅಡ್ಡಲಾಗಿ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಕಟ್ಟಿಂಗೇರಿ ರಸ್ತೆಯ ಹರಿಶ್ಚಂದ್ರ ಎಂಬವರ ಮನೆಯ ಪಕ್ಕದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳುವ ಸ್ಥಿತಿಯಲ್ಲಿದ್ದು, ಮಂಗಳವಾರ ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಗಾಳಿಯ ರಭಸಕ್ಕೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಗೆ ಉರುಳಿದ್ದು, ಘಟನೆಯಿಂದ ವಿದ್ಯುತ್ ಕಂಬ, ತಂತಿಗಳು ಮುರಿದು ಬಿದ್ದಿದೆ.

ಮುಂಜಾನೆ ಮಸೀದಿಗೆ ಹೋಗಿದ್ದ ಸ್ಥಳೀಯ ಮನ್ಸೂರು ಎಂಬವರು ಕೂಡಲೇ ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮಾಹಿತಿ ನೀಡಿದ್ದಾರೆ. ಮನ್ಸೂರ್ ಅವರ ಸಮಯ ಪ್ರಜ್ಞೆಯಿಂದ ವಿದ್ಯುತ್ ಅವಘಡ ತಪ್ಪಿದೆ. ಪಕ್ಕದಲ್ಲೇ ಅಂಗನವಾಡಿ ಮತ್ತು ಮನೆಯೊಂದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News