4 ದಿನಗಳಲ್ಲಿ 160 ಶಂಕಿತ ಡೆಂಗ್ ಪ್ರಕರಣ ದಾಖಲು: ದ.ಕ. ಜಿಲ್ಲಾಧಿಕಾರಿ

Update: 2019-08-06 07:49 GMT

ಮಂಗಳೂರು, ಆ. 6: ದ.ಕ. ಜಿಲ್ಲೆಯಲ್ಲಿ ಕಳೆದ ಜನವರಿಯಿಂದ ಈವರೆಗೆ 656 ಡೆಂಗ್ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 160 ಶಂಕಿತ ಡೆಂಗ್ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯ 88 ಪ್ರಯೋಗಾಲಯಗಳು ಹಾಗೂ ಎಲ್ಲಾ ಆಸ್ಪತ್ರೆಗಳಿಂದಲೂ ಸಾಮಾನ್ಯ ಜ್ವರ ಪೀಡಿತ ರೋಗಿಯ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕೆಲ ಹಾಕಿಕೊಂಡು ಜಿಲ್ಲಾಡಳಿತ ಡೆಂಗ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದರು.

ರೋಗಿಗಳ ಜತೆ ನಿರಂತರ ಸಂಪರ್ಕದೊಂದಿಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದೇ ವೇಳೆ ಡೆಂಗ್ ಲಾರ್ವಾ ನಾಶಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಡೆಂಗ್ ಪ್ರಮುಖವಾಗಿ ಬಾಧಿಸಿದ್ದ ಮೂರು ಪ್ರದೇಶಗಳಿಂದ ಇತರ ಕಡೆಗಳಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗಿದ್ದು, ಈ ಪ್ರದೇಶಗಳಲ್ಲಿ ಲಾರ್ವಾ ನಾಶದಂತಹ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿವೆ ಎಂದು ಅವರು ಹೇಳಿದರು.

ಲಾರ್ವಾ ಪತ್ತೆ- ನಾಶ: ಸಾರ್ವಜನಿಕರ ಸಹಕಾರ ಮುಂದುವರಿಯಲಿ

ಲಾರ್ವಾ ಪತ್ತೆ ಹಾಗೂ ನಾಶಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಸಹಕಾರ ವ್ಯಕ್ತವಾಗಿದೆ. ಇದು ಹೀಗೆ ಮುಂದುವರಿಯಬೇಕಿದೆ. ಮುಂದಿನ ಜನವರಿಗೂ ಈ ಕಾರ್ಯವನ್ನು ಜಿಲ್ಲಾಡಳಿತವು ಮುಂದುವರಿಸಲಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಸಾಮಾಜಿಕ ಸಂಘಟನೆಗಳು, ಸರಕಾರತೇರ ಸಂಘಟನೆಗಳು ಕೂಡಾ ಲಾರ್ವಾ ನಾಶ ಕಾರ್ಯದಲ್ಲಿ ಸಹಕರಿಸುತ್ತಿವೆ ಎಂದು ಅವರು ಹೇಳಿದರು.

ಲಾರ್ವಾ ನಾಶಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ಗಡುವು ಮುಗಿದು ಪರಿಶೀಲನೆ ನಡೆಸಲಾಗುತ್ತಿದೆ. ಇಂದಿನಿಂದ ದಂಡ ವಿಧಿಸುವ ಪ್ರಕ್ರಿಯೆ ನಡೆಯಲಿದೆ. ಇತರ ನಿರ್ಮಾಣ ಹಂತದ ಕಟ್ಟಡ ಸೇರಿದಂತೆ ಲಾರ್ವಾ ಉತ್ಪತ್ತಿ ತಾಣಗಳಿಗೆ ದಂಡ ವಿಧಿಸುವ ಕ್ರಮದಡಿ ಈಗಾಗಲೇ ಮನಪಾದಿಂದ 4.5 ಲಕ್ಷ ರೂ. ದಂಡ ಸಂಗ್ರಹಿಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಆ್ಯಂಟನಿ ವೇಸ್ಟ್ ವಿರುದ್ಧವೂ ನೋಟೀಸು

ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿ ಮನಪಾ ವ್ಯಾಪ್ತಿಯಲ್ಲಿ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನಿಂದ ಸಾಕಷ್ಟು ನಿರ್ಲಕ್ಷ ವಹಿಸಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮನಪಾದಿಂದ ನೋಟೀಸು ನೀಡಲು ಆಯುಕ್ತರು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ಎಂಪಿಡಬ್ಲು ಕಾರ್ಯಕರ್ತರಿನ್ನು ಡಿಎಚ್‌ಒ ನಿಯಂತ್ರಣಕ್ಕೆ

ಮಲೇರಿಯಾ, ಡೆಂಗ್ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸುವ ಮನಪಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಮಂದಿ ಎಂಪಿಡಬ್ಲು ಕಾರ್ಯಕರ್ತರನ್ನು ಆರೋಗ್ಯ ಇಲಾಖೆಯ (ಡಿಎಚ್‌ಒ) ನಿಯಂತ್ರಣಕ್ಕೊಳಪಡಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ನಿಯಮಿತ ಅವಧಿಯಲ್ಲಿ ಮಾತ್ರವೇ ಆ ಕಾರ್ಯಕರ್ತರಿಗೆ ಕೆಲಸವಿರುವುದರಿಂದ ಉಳಿದ ಅವಧಿಯಲ್ಲಿ ಅವರನ್ನು ಇತರ ಕೆಲಸಗಳಿಗೆ ಮನಪಾದಿಂದ ನಿಯೋಜಿಸಲಾಗುತ್ತಿತ್ತು. ಇದೀಗ ಅವರೆಲ್ಲರೂ ಮುಖ್ಯವಾಗಿ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ಕಾರ್ಯ ನಿರ್ವಹಿಸಲಿದ್ದು, ಡಿಎಚ್‌ಒ ಅನುಮತಿಯ ಮೇರೆಗೆ ಇತರ ಕೆಲಸಗಳಿಗೆ ನಿಯೋಜಿಸುವ ವ್ಯವಸ್ಥೆಯನ್ನು ಮಾಡಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News