ಕಾಶ್ಮೀರ ಕುರಿತಂತೆ ಹೇಳಿಕೆ: ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಪ್ರಮಾದ

Update: 2019-08-06 09:31 GMT

ಹೊಸದಿಲ್ಲಿ, ಆ.6: ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಇಂದು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯದ ಕುರಿತಂತೆ  ಸರಕಾರ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ಹೇಳಿಕೆ ನೀಡಿದ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ  ಅಧೀರ್ ರಂಜನ್ ಚೌಧುರಿ ತಮ್ಮ ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದ್ದಾರೆ.

ಈ ಸಂದರ್ಭ ಸದನದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಹಾಜರಿದ್ದರು.

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ಕುರಿತಂತೆ ಇಂದು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆಯೇ ಪಾಕ್ ಆಕ್ರಮಿತ ಕಾಶ್ಮೀರದ ಕುರಿತಂತೆ ಸರಕಾರದ ನಿಲುವೇನೆಂದು ಅಧೀರ್ ರಂಜನ್ ಚೌಧುರಿ ಕೇಳಿದರಲ್ಲದೆ, “ನೀವು  ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಿದ್ದೀರೆಂದು ನನಗೆ ತೋರುವುದಿಲ್ಲ,  ನೀವು ರಾಜ್ಯವೊಂದನ್ನು ರಾತ್ರಿ ಬೆಳಗಾಗುವುದರೊಳಗಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದ್ದೀರಿ'' ಎಂದು ಹೇಳಿದರು.

“ನೀವು ಇದೊಂದು ಆಂತರಿಕ ವಿಚಾರವೆನ್ನುತ್ತೀರಿ. ಆದರೆ 1948ರಿಂದ ಈ ವಿಚಾರವನ್ನು ವಿಶ್ವ ಸಂಸ್ಥೆ ಗಮನಿಸುತ್ತಿದೆ. ಇದು ಆಂತರಿಕ ವಿಚಾರವೇ?, ನಾವು ಶಿಮ್ಲಾ ಒಪ್ಪಂದ ಹಾಗೂ ಲಾಹೋರ್ ಘೋಷಣೆಗೆ ಸಹಿ ಹಾಕಿದೆವು. ಇದು ಆಂತರಿಕ ವಿಚಾರವೇ ಅಥವಾ ದ್ವಿಪಕ್ಷೀಯ ವಿಚಾರವೇ ?, ಜಮ್ಮು ಕಾಶ್ಮೀರ ಈಗಲೂ ಆಂತರಿಕ ವಿಚಾರವಾಗಬಹುದೇ ?, ನಮಗೆ ತಿಳಿಯಬೇಕು. ಇಡೀ ಕಾಂಗ್ರೆಸ್ ಪಕ್ಷ ಈ ಬಗ್ಗೆ ನಿಮ್ಮಿಂದ ವಿವರ ಕೇಳುತ್ತದೆ'' ಎಂದು ಚೌಧುರಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾ, “ನೀವು ಜಮ್ಮು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತಿಲ್ಲವೇ?, ನೀವೇನು ಹೇಳುತ್ತಿದ್ದೀರಿ ?, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.  ನಾನು ಜಮ್ಮು ಕಾಶ್ಮೀರ ಎಂದು ಹೇಳುವಾಗ ಅದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದೆ. ಜಮ್ಮು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಬರುತ್ತದೆಯೆಂದು ನೀವು ಅಂದುಕೊಂಡಿಲ್ಲದೇ ಇದ್ದುದರಿಂದ ನಾನು ಆಕ್ರಮಣಕಾರಿಯಾಗಬೇಕಾಯಿತು. ಅದಕ್ಕಾಗಿ ನಾವು ಸಾಯಲು ಕೂಡ ಸಿದ್ಧ” ಎಂದರು.

ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಂತರ ಅಧೀರ್ ರಂಜನ್ ಚೌಧುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News