ಅಯೋಧ್ಯೆ ಪ್ರಕರಣ : ಕಲಾಪದ ನೇರಪ್ರಸಾರ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

Update: 2019-08-06 13:30 GMT

ಹೊಸದಿಲ್ಲಿ, ಆ.6: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದ ನ್ಯಾಯ ವಿಚಾರಣೆಯ ನೇರಪ್ರಸಾರ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಈಗ ಇದು ಕಾರ್ಯಸಾಧ್ಯವಲ್ಲ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಹೇಳಿದೆ.

ಆರೆಸ್ಸೆಸ್ ಮುಖಂಡ ಕೆಎನ್ ಗೋವಿಂದಾಚಾರ್ಯ ಅರ್ಜಿ ಸಲ್ಲಿಸಿದ್ದರು. ಅಯೋಧ್ಯೆ ಜಮೀನು ನಿರ್ಮೋಹಿ ಅಖಾಡದ ಅನನ್ಯ ಸ್ವಾಧೀನದಲ್ಲಿದ್ದು 1934ರಿಂದ ಇಲ್ಲಿಗೆ ಮುಸ್ಲಿಮರಿಗೆ ಪ್ರವೇಶ ನೀಡಿಲ್ಲ ಎಂದು ಅಯೋಧ್ಯೆ ಪ್ರಕರಣದ ಕಕ್ಷಿಗಳಲ್ಲಿ ಒಬ್ಬರಾದ ನಿರ್ಮೋಹಿ ಅಖಾಡದ ಪ್ರತಿನಿಧಿ ಸುಶೀಲ್ ಜೈನ್ ನ್ಯಾಯ ಪೀಠಕ್ಕೆ ತಿಳಿಸಿದರು. ನಿರ್ಮೋಹಿ ಅಖಾಡವು ನೋಂದಾಯಿತ ಸಂಸ್ಥೆಯಾಗಿದ್ದು, ಅಯೋಧ್ಯೆ ಪ್ರದೇಶದ ಸ್ವಾಧೀನತೆ ಮತ್ತು ನಿರ್ವಹಣೆಯ ಹಕ್ಕು ಕೋರುತ್ತಿದ್ದೇವೆ.

ಅಖಾಡವು ನೂರಾರು ವರ್ಷಗಳಿಂದ ರಾಮ ಜನ್ಮಸ್ಥಾನ ಹಾಗೂ ಒಳಪ್ರಾಂಗಣದ ಸ್ವಾಧೀನತೆಯನ್ನು ಹೊಂದಿತ್ತು . ಇತರ ಪ್ರಾಂಗಣಗಳಾದ ಸೀತಾ ರಸೋಯಿ, ಚಬೂತ್ರ, ಭಂಧರ್ ಗರ್ ಕೂಡಾ ನಮ್ಮ ಸ್ವಾಧೀನದಲ್ಲೇ ಇದೆ. ಆದರೆ ಇವು ವಿವಾದಾಸ್ಪದ ಭೂಮಿಯಲ್ಲಿ ಸೇರಿಲ್ಲ ಎಂದವರು ತಿಳಿಸಿದರು. ಅಯೋಧ್ಯೆ ವಿವಾದದ ಪರಿಹಾರಕ್ಕೆ ನೇಮಿಸಲಾಗಿದ್ದ ಸಂಧಾನ ತಂಡ ವಿಫಲವಾದ ಕಾರಣ ಮಂಗಳವಾರದಿಂದ ಈ ಪ್ರಕರಣವನ್ನು ದಿನಾ ವಿಚಾರಣೆ ನಡೆಸಬೇಕೆಂದು ಕಳೆದ ವಾರ ಸುಪ್ರೀಂ ಸೂಚಿಸಿದೆ. ಸಿಜೆಐ ಗೊಗೊಯಿ ನೇತೃತ್ವದ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್‌ಎ ನಝೀರ್ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News