ಆರೋಪಗಳ ರದ್ದತಿ ಕೋರಿದ್ದ ತೇಜಪಾಲ್ ಅರ್ಜಿ ಬಗ್ಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ
Update: 2019-08-06 19:53 IST
ಹೊಸದಿಲ್ಲಿ, ಆ.6: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ತೆಹಲ್ಕಾದ ಮಾಜಿ ಮುಖ್ಯ ಸಂಪಾದಕ ತರುಣ್ ತೇಜಪಾಲ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ತನ್ನ ಆದೇಶವನ್ನು ಮಂಗಳವಾರ ಸರ್ವೋಚ್ಚ ನ್ಯಾಯಾಲಯವು ಕಾಯ್ದಿರಿಸಿದೆ.
ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ತೇಜಪಾಲ್‌ರನ್ನು 2013, ನ.30ರಂದು ಬಂಧಿಸಲಾಗಿತ್ತು. 2017,ಸೆಪ್ಟೆಂಬರ್‌ನಲ್ಲಿ ಗೋವಾದ ವಿಚಾರಣಾ ನ್ಯಾಯಾಲಯವು ಅವರ ವಿರುದ್ಧ ಐಪಿಸಿಯಡಿ ಅತ್ಯಾಚಾರ,ಲೈಂಗಿಕ ಕಿರುಕುಳ ಮತ್ತು ಅಕ್ರಮ ದಿಗ್ಬಂಧನ ಆರೋಪಗಳನ್ನು ಹೊರಿಸಿತ್ತು. ತಾನು ಅಮಾಯಕ ಮತ್ತು ಯಾವುದೇ ತಪ್ಪು ಮಾಡಿಲ್ಲ ಎಂದು ತೇಜಪಾಲ್ ಪ್ರತಿಪಾದಿಸಿದ್ದರು. ಸದ್ಯ ಅವರು ಜಾಮೀನಿನಲ್ಲಿ ಹೊರಗಿದ್ದಾರೆ.
ತನ್ನ ಮೇಲಿನ ಆರೋಪಗಳನ್ನು ಪ್ರಶ್ನಿಸಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು.