ಅಡಿಗೆಯನ್ನು ಸುಲಭವಾಗಿಸುವ ನಾನ್-ಸ್ಟಿಕ್ ಕುಕ್‌ವೇರ್ ಅಪಾಯವನ್ನೂ ತರುತ್ತದೆ!

Update: 2019-08-06 15:57 GMT

ಇಂದು ಮಹಿಳೆಯರು ಅಡಿಗೆ ಮನೆಯ ಅಗತ್ಯಗಳನ್ನು ಖರೀದಿಸುವಾಗ ನಾನ್-ಸ್ಟಿಕ್ ಕುಕ್‌ವೇರ್ ಅಥವಾ ಅಂಟಿಕೊಳ್ಳದ ಅಡಿಗೆ ಸಾಧನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ನಾನ್-ಸ್ಟಿಕ್ ಪಾತ್ರೆಗಳು ಅತ್ಯಂತ ಕಡಿಮೆ ಎಣ್ಣೆಯನ್ನು ಬಳಸುವುದರಿಂದ ಹೆಚ್ಚು ಅನುಕೂಲಕರವಾಗಿವೆ. ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಆಹಾರವನ್ನು ಬೇಯಿಸುವಾಗ ನೀವು ಅತ್ಯಂತ ಕಡಿಮೆ ಎಣ್ಣೆ ಬಳಸಿದ್ದರೂ ಅದು ಅಂಟಿಕೊಳ್ಳುವುದಿಲ್ಲ. ನಾನ್-ಸ್ಟಿಕ್‌ನ ಅನುಕೂಲತೆಗಳಿಂದಾಗಿ ಹೆಚ್ಚಿನ ಮನೆಗಳಲ್ಲಿ ಅವು ಬಳಕೆಯಾಗುತ್ತಿವೆ.

ನಾನ್ ಸ್ಟಿಕ್ ಅಡಿಗೆ ಪಾತ್ರೆಗಳು ಅನುಕೂಲವನ್ನು ನೀಡುವಷ್ಟೇ ಹಾನಿಯನ್ನೂ ನಮ್ಮ ಆರೋಗ್ಯಕ್ಕುಂಟು ಮಾಡುತ್ತವೆ.

 ಈ ಪಾತ್ರೆಗಳ ತಯಾರಿಕೆಯಲ್ಲಿ ಬಳಸಲಾಗುವ ಪರ್‌ಫ್ಲುರೊಒಕ್ಟನಾಯಿಕ್ ಆ್ಯಸಿಡ್(ಪಿಎಫ್‌ಒಎ) ಕ್ಯಾನ್ಸರ್‌ಕಾರಕವಾಗಿದ್ದು ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡಿಗೆ ಮಾಡುತ್ತಿರುವಾಗ,ವಿಶೇಷವಾಗಿ ಅವು ಅತಿಯಾಗಿ ಬಿಸಿಯಾದಾಗ ವಿಷಕಾರಿ ಹೊಗೆಯನ್ನು ಹೊರಸೂಸುತ್ತದೆ. ಈ ಹೊಗೆಯನ್ನು ಸೇವಿಸಿದರೆ ನಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತಾಗುತ್ತದೆ. ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡಿಗೆ ಮಾಡುವುದರಿಂದ ಉಂಟಾಗುವ ಹಾನಿಗಳು ಇಲ್ಲಿವೆ.

► ಥೈರಾಯ್ಡ

ಪಿಎಫ್‌ಒಎ ಫ್ಲೋರೈಡ್ ಸಂಯುಕ್ತವಾಗಿದೆ. ಫ್ಲೋರೈಡ್ ಮೂಲತಃ ವಿಷವಸ್ತುವಾಗಿದ್ದು ಅದು ಹೈಪೊಥೈರಾಯ್ಡಿಸಮ್‌ಗೆ ಕಾರಣವಾಗುತ್ತದೆ.

► ಅರಿವಿನ ಕ್ಷೀಣತೆ

 ನಾನ್-ಸ್ಟಿಕ್ ಪಾಟ್‌ಗಳು ಮತ್ತು ಪ್ಯಾನ್‌ಗಳಲ್ಲಿರುವ ಫ್ಲೋರೈಡ್‌ನಿಂದಾಗಿ ಗ್ರಹಣ ಶಕ್ತಿ ಕ್ಷೀಣಿಸುತ್ತದೆ

► ಮೂಳೆ ರೋಗ ನಾನ್-ಸ್ಟಿಕ್ ಪಾತ್ರೆಗಳ ನಿಯಮಿತ ಬಳಕೆಯಿಂದಾಗಿ ಮೂಳೆಗಳು ಪೆಡಸಾಗುತ್ತವೆ ಮತ್ತು ಮೂಳೆಗಳು ದುರ್ಬಲಗೊಳ್ಳುತ್ತವೆ.

► ಕ್ಯಾನ್ಸರ್

ಪಿಎಫ್‌ಒಎ ಹಲ್ಲುಗಳು,ಮೂಳೆಗಳು ಮತ್ತು ಪೈನಿಯಲ್ ಗ್ರಂಥಿಯಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ವಿವಿಧ ಕ್ಯಾನ್ಸರ್‌ಗಳಿಗೆ ನಾಂದಿ ಹಾಡುತ್ತದೆ.

► ಹೃದಯಾಘಾತ

  ಪ್ರತಿದಿನ ಪಿಎಫ್‌ಒಎಗೆ ಒಡ್ಡಿಕೊಳ್ಳುವುದು ಶರೀರದಲ್ಲಿಯ ಟ್ರೈಗ್ಲಿಸರೈಡ್ ಮಟ್ಟಗಳನ್ನು ಹೆಚ್ಚಿಸುತ್ತದೆ ಎನ್ನುವುದು ನಾನ್-ಸ್ಟಿಕ್ ಪಾತ್ರೆಗಳ ಕುರಿತು ಎಚ್ಚರಿಕೆಯ ಸಂಕೇತವಾಗಿದೆ. ಶರೀರದಲ್ಲಿ ಟ್ರೈಗ್ಲಿಸರೈಡ್ ಮಟ್ಟಗಳು ಹೆಚ್ಚಿದರೆ ಅದು ಹೃದಯಾಘಾತ,ಪಾರ್ಶ್ವವಾಯು ಮತ್ತು ಇತರ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

► ಸಂತಾನೋತ್ಪತ್ತಿ ಸಮಸ್ಯೆ

 ಗರ್ಭಿಣಿಯರು ಪ್ರತಿದಿನ ಪಿಎಫ್‌ಒಎಗೆ ತೆರೆದುಕೊಂಡರೆ ಅದು ಅತ್ಯಂತ ಹಾನಿಕಾರಕವಾಗುತ್ತದೆ. ಅದು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಹಾಗೂ ಕಡಿಮೆ ಜನನ ತೂಕ,ಮಗುವಿನ ತಲೆಯ ಗಾತ್ರದಲ್ಲಿ ಬದಲಾವಣೆಯಂತಹ ಹಲವಾರು ಜನ್ಮದತ್ತ ದೋಷಗಳಿಗೆ ಕಾರಣವಾಗುತ್ತದೆ.

► ರೋಗ ನಿರೋಧಕ ವ್ಯವಸ್ಥೆ

 ನಾನ್-ಸ್ಟಿಕ್ ಅಡಿಗೆ ಪಾತ್ರೆಗಳು ಶರೀರದ ರೋಗ ನಿರೋಧಕ ಶಕಿಗೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದು ಅವು ತರುವ ಅತ್ಯಂತ ಆಘಾತಕಾರಿ ಅಪಾಯವಾಗಿದೆ.

► ಯಕೃತ್ತು

ನಾನ್-ಸ್ಟಿಕ್ ಪಾತ್ರೆಗಳು ಹೊರಸೂಸುವ ವಿಷಯುಕ್ತ ಹೊಗೆಯು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಗೆ ಅಪಾಯಕಾರಿಯಾಗಿದೆ.

► ಮೂತ್ರಪಿಂಡಗಳು

ಪಿಎಫ್‌ಒಎ ಮೂತ್ರಪಿಂಡಗಳಿಗೂ ಹಾನಿಯನ್ನುಂಟು ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಬೆಳಕಿಗೆ ತಂದಿವೆ ಮತ್ತು ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ.

► ಕೊಲೆಸ್ಟ್ರಾಲ್

ನಾನ್-ಸ್ಟಿಕ್ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ ಪಿಎಫ್‌ಒಎ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಹೃದ್ರೋಗಕ್ಕೆ ಕಾರಣವಾಗುತ್ತದೆ.

ನಾನ್-ಸ್ಟಿಕ್ ಕುಕ್‌ವೇರ್‌ನಿಂದ ಇಷ್ಟೆಲ್ಲ ಅಪಾಯಗಳಿರುವಾಗ ಸಾಂಪ್ರದಾಯಿಕವಾದ ಬೀಡು ಕಬ್ಬಿಣದ ಕಾವಲಿ,ಬಾಣಲೆ ಇತ್ಯಾದಿಗಳಿಗೆ ಮರಳುವುದು ಬುದ್ಧಿವಂತಿಕೆಯಾಗುತ್ತದೆ. ಆದರೆ ನಾನ್-ಸ್ಟಿಕ್ ಮೇಲಿನ ವ್ಯಾಮೋಹವನ್ನು ಬಿಡಲು ಅಸಾಧ್ಯವೆಂದಾದರೆ ಅವುಗಳಲ್ಲಿ ಕಡಿಮೆ ಉಷ್ಣತೆಯಲ್ಲಿ ಆಹಾರಗಳನ್ನು ಬೇಯಿಸಿ. ವಿಷಾನಿಲ ಸಂಯುಕ್ತಗಳು ಹೊರಹೊಮ್ಮುವುದನ್ನು ತಡೆಯಲು ಉಷ್ಣತೆ 500 ಡಿಗ್ರಿ ಫ್ಯಾರೆನ್‌ಹೀಟ್ ಮೀರದಂತೆ ಎಚ್ಚರಿಕೆ ವಹಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News