“ಲಡಾಖ್ ಪುನರ್‌ರಚನೆ ಕ್ರಮ ಸ್ವೀಕಾರಾರ್ಹವಲ್ಲ”.

Update: 2019-08-06 16:21 GMT

ಹೊಸದಿಲ್ಲಿ, ಆ.6: ಪ್ರದೇಶದಲ್ಲಿ ಉದ್ವಿಗ್ನತೆಯನ್ನು ನಿವಾರಿಸಲು ಜಮ್ಮು-ಕಾಶ್ಮೀರದಲ್ಲಿ ಏಕಪಕ್ಷೀಯ ಕ್ರಮಗಳನ್ನು ಭಾರತವು ಕೈಬಿಡಬೇಕು ಎಂದು ಮಂಗಳವಾರ ಹೇಳಿರುವ ಚೀನಾ,ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಭಾರತ ಸರಕಾರದ ನಿರ್ಧಾರವು ಸ್ವೀಕಾರಾರ್ಹವಲ್ಲ ಎಂದಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಕೇಂದ್ರದ ನಿರ್ಧಾರಗಳಿಗೆ ಚೀನಾ ತಕ್ಷಣವೇ ಪ್ರತಿಕ್ರಿಯಿಸಿರಲಿಲ್ಲವಾದರೂ,ಶೀಘ್ರವೇ ಅದರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು. ಅದರ ಆಪ್ತ ಮತ್ತು ವ್ಯೆಹಾತ್ಮಕ ಪಾಲುದಾರ ದೇಶವಾಗಿರುವ ಪಾಕಿಸ್ತಾನವು ಕಾಶ್ಮೀರದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿರುವುದು ಮತ್ತು ಅಕ್ಸಾಯಿ ಚಿನ್‌ನಲ್ಲಿ ವಿವಾದಿತ ಚೀನಾ-ಭಾರತ ಗಡಿಯ ಭಾಗಗಳು ಲಡಾಖ್‌ನಲ್ಲಿರುವುದು ಈ ನಿರೀಕ್ಷೆಗೆ ಕಾರಣವಾಗಿದ್ದವು. ಚೀನಾದ ವಿದೇಶಾಂಗ ಸಚಿವಾಲಯವು ಮಂಗಳವಾರ ಎರಡು ಪ್ರತ್ಯೇಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದೆ.

ಭಾರತದ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಚೀನಾ-ಭಾರತ ಗಡಿಯ ಪಶ್ಚಿಮ ಭಾಗದಲ್ಲಿಯ ತನ್ನ ಭೂಪ್ರದೇಶದ ಸೇರ್ಪಡೆಯನ್ನು ಚೀನಾ ಸದಾ ವಿರೋಧಿಸುತ್ತಲೇ ಬಂದಿದೆ. ಈ ನಿಲುವು ದೃಢವಾಗಿದ್ದು,ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿದೇಶಾಂಗ ಇಲಾಖೆಯು ಭಾರತ ತನ್ನ ಹಕ್ಕು ಪ್ರತಿಪಾದಿಸುತ್ತಿರುವ ಆದರೆ ಚೀನಾದ ವಶದಲ್ಲಿರುವ ಲಡಾಖ್‌ನಲ್ಲಿರುವ ಪ್ರದೇಶವನ್ನು ಪ್ರಸ್ತಾಪಿಸಿ ತನ್ನ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಭಾರತವು ತನ್ನ ಕಾನೂನುಗಳಿಗೆ ಏಕಪಕ್ಷೀಯವಾಗಿ ತಿದ್ದುಪಡಿಗಳನ್ನು ತರುವ ಮೂಲಕ ಚೀನಾದ ಸಾರ್ವಭೌಮತೆಯ ಕಡೆಗಣನೆಯನ್ನು ಮುಂದುವರಿಸಿದೆ. ಈ ಪರಿಪಾಠ ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ಫಲವನ್ನು ನೀಡುವುದಿಲ್ಲ ಎಂದಿರುವ ಹೇಳಿಕೆಯು,ಗಡಿ ವಿಷಯದಲ್ಲಿ ತನ್ನ ಮಾತು ಮತ್ತು ಕೃತಿಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ,ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಗಡಿ ವಿವಾದವನ್ನು ಇನ್ನಷ್ಟು ಜಟಿಲಗೊಳಿಸುವ ಕ್ರಮಗಳಿಂದ ದೂರವಿರುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ ಎಂದು ಉಭಯ ದೇಶಗಳ ನಡುವೆ ದಶಕಗಳಿಂದಲೂ ನಡೆಯುತ್ತಿರುವ ಸುದೀರ್ಘ ಗಡಿ ಮಾತುಕತೆಗಳನ್ನು ಪ್ರಸ್ತಾಪಿಸಿ ಹೇಳಿದೆ.

ಕಾಶ್ಮೀರದಲ್ಲಿಯ ಪ್ರಚಲಿತ ಸ್ಥಿತಿಯ ಬಗ್ಗೆ ಚೀನಾ ಕಳವಳಗೊಂಡಿದೆ. ಕಾಶ್ಮೀರ ವಿವಾದದಲ್ಲಿ ಚೀನಾದ ನಿಲುವು ಸ್ಪಷ್ಟವಾಗಿದೆ.ಅದು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪರಂಪರಾಗತ ವಿವಾದವಾಗಿದೆ ಮತ್ತು ಅಂತರರಾಷ್ಟ್ರೀಯ ಸಮುದಾಯವೂ ಇದನ್ನು ಒಪ್ಪಿಕೊಂಡಿದೆ. ಉಭಯ ದೇಶಗಳು ಹೆಚ್ಚಿನ ಉದ್ವಿಗ್ನತೆಗೆ ಎಡೆಕೊಡದಂತೆ ಸಂಯಮ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದೂ ವಿದೇಶಾಂಗ ಇಲಾಖೆಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News