ಪಿಒಕೆ, ಅಕ್ಸೈ ಚಿನ್ ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗ: ಅಮಿತ್ ಶಾ

Update: 2019-08-06 16:22 GMT

ಹೊಸದಿಲ್ಲಿ, ಆ.6: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಹಾಗೂ ಅಕ್ಸೈ ಚಿನ್ ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ . ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

 ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರಕ್ಕಾಗಿ ಪ್ರಾಣತ್ಯಾಗ ಮಾಡಲೂ ಸರಕಾರದ ಮುಖಂಡರು ಸಿದ್ಧರಿದ್ದಾರೆ ಎಂದರು. ಕಾಶ್ಮೀರ ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಗೊಳಿಸಬೇಕು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದರಲ್ಲಿ ಅನುಮಾನವೇ ಇಲ್ಲ. ನಾನು ಜಮ್ಮು ಕಾಶ್ಮೀರದ ಬಗ್ಗೆ ಮಾತಾಡುವಾಗ ಪಿಒಕೆ ಮತ್ತು ಅಕ್ಸೈ ಚಿನ್ ವಿಷಯ ಕೂಡಾ ಇದರಲ್ಲಿ ಸೇರಿರುತ್ತದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿಯವರ ಪ್ರಶ್ನೆಗೆ ಉತ್ತರವಾಗಿ ಶಾ ಹೇಳಿದರು.

370ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆ ಹಾಗೂ ನಿರ್ಣಯ ಜನರ ಹಕ್ಕಿನ ಉಲ್ಲಂಘನೆ ಎಂಬ ವಿಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಶಾ, ಕಾಶ್ಮೀರದ ಕುರಿತ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರದ ಕುರಿತು ಯಾವುದೇ ಕಾನೂನು ರೂಪಿಸಲು ದೇಶದ ಸಂಸತ್ತನ್ನು ಯಾರೂ ತಡೆಯಲಾರರು. ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆ ನಿರ್ಣಯ ಜಾರಿಗೊಳಿಸಬೇಕೆಂದು ಕಾಂಗ್ರೆಸ್ ಬಯಸುತ್ತಿದೆಯೇ ಎಂದು ಶಾ ಪ್ರಶ್ನಿಸಿದರು.

1948ರಲ್ಲಿ ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಾಯಿತು. ಬಳಿಕ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಶಿಮ್ಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ರಾಜಕೀಯ ವಿಷಯವಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಎಂಬ ಎಂಬ ವಿಷಯದಲ್ಲಿ ಕಾನೂನಾತ್ಮಕ ಅಥವಾ ವಿಧಾಯಕ (ಶಾಸನಸಭೆ) ಭಿನ್ನಾಭಿಪ್ರಾಯ ಇಲ್ಲ ಎಂದು ಶಾ ಸ್ಪಷ್ಟಪಡಿಸಿದರು.

ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಮತ್ತು ಜಮ್ಮು ಕಾಶ್ಮೀರ ಇದನ್ನು ಒಪ್ಪಿಕೊಂಡಿದೆ. ಆದ್ದರಿಂದ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಕಾನೂನು ಜಾರಿಗೊಳಿಸಲು ದೇಶದ ಸಂಸತ್ತು ಸಮರ್ಥವಾಗಿದೆ. ಭಾರತದ ಸಂವಿಧಾನ ಹಾಗೂ ಜಮ್ಮು ಕಾಶ್ಮೀರದ ಸಂವಿಧಾನದಲ್ಲಿ ನಿರ್ಧರಿಸಿರುವಂತೆ ಜಮ್ಮು ಮತ್ತು ಕಾಶ್ಮೀರದ ಗಡಿಯೊಳಗೆ ಪಿಒಕೆ ಹಾಗೂ ಅಕ್ಸೈ ಚಿನ್ ಪ್ರದೇಶ ಬರುತ್ತದೆ ಎಂದು ಶಾ ಹೇಳಿದರು.

ಈ ಎರಡೂ ಭಾಗಗಳು ಈಗ ಪಾಕಿಸ್ತಾನ ಮತ್ತು ಚೀನಾದ ನಿಯಂತ್ರಣದಲ್ಲಿವೆ. ಈ ಸಂದರ್ಭ ಮಧ್ಯಪ್ರವೇಶಿಸಿದ ಡಿಎಂಕೆಯ ಟಿಆರ್ ಬಾಲು, ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇರುವಂತೆ ಭಾಸವಾಗುತ್ತದೆ. ನಮ್ಮ ಸಹೋದ್ಯೋಗಿ ಫಾರೂಕ್ ಅಬ್ದುಲ್ಲಾ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಗೃಹಬಂಧನದಲ್ಲಿ ಇದ್ದಾರೆಯೇ ಅಥವಾ ಬಂಧನದಲ್ಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಶಾ, ಇದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಲಡಾಕ್ ಜನರ ಕೋರಿಕೆಯಂತೆ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಲಡಾಕ್‌ನಲ್ಲಿ ಅಕ್ಸೈ ಚಿನ್ ಸೇರಿದೆ.

ಲಡಾಕ್‌ನ ಎರಡು ಹಿಲ್ ಕೌನ್ಸಿಲ್‌ಗಳು ಮುಂದುವರಿಯಲಿದ್ದು ಅದರ ಅಧ್ಯಕ್ಷರಿಗೆ ಸಚಿವರ ದರ್ಜೆ ನೀಡಲಾಗುವುದು. ಹಿಲ್ ಮೆಂಬರ್‌ಗಳು ತಮ್ಮ ಪ್ರದೇಶದ ಸಮಸ್ಯೆಗೆ ಧ್ವನಿಯಾಗಲಿದ್ದಾರೆ. ಇದರಲ್ಲಿ ಯಾರ ಶಾಸಕಾಂಗ ಹಕ್ಕಿನ ಮೇಲೂ ಪರಿಣಾಮವಾಗಿಲ್ಲ ಎಂದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದೆ. ಶಾಸಕರು, ಮುಖ್ಯಮಂತ್ರಿ ಇರುತ್ತಾರೆ ಎಂದು ಶಾ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News