370ನೇ ವಿಧಿ ರದ್ದು: ಯುಎಇ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-08-06 16:41 GMT

ದುಬೈ, ಆ. 6: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಭಾರತದ ನಿರ್ಧಾರವು ಆಂತರಿಕ ವಿಷಯವಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೇಳಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

‘‘ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಉದ್ದೇಶದ ಜಮ್ಮು ಮತ್ತು ಕಾಶ್ಮೀರ ಮರುವಿಂಗಡನೆ ಮಸೂದೆಯನ್ನು ಭಾರತೀಯ ಸಂಸತ್ತಿನಲ್ಲಿ ಮಂಡಿಸಿರುವುದನ್ನು ನಾವು ಗಮನಿಸಿದ್ದೇವೆ’’ ಎಂದು ಭಾರತಕ್ಕೆ ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ ಹೇಳಿದ್ದಾರೆ ಎಂದು ಪತ್ರಿಕೆ ಹೇಳಿದೆ.

‘‘ನನ್ನ ಮಾಹಿತಿಯ ಪ್ರಕಾರ, ರಾಜ್ಯದ ಮರುವಿಂಗಡನೆಯು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಏಕೈಕ ಘಟನೆಯಲ್ಲ. ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುವ ಹಾಗೂ ದಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ ಎಂದು ಅದು ವರದಿ ಮಾಡಿದೆ.

ಇದು ಭಾರತೀಯ ಸಂವಿಧಾನದ ಅಡಿಯಲ್ಲಿ ತೆಗೆದುಕೊಳ್ಳಲಾದ ಆಂತರಿಕ ವಿಷಯವಾಗಿದೆ ಎನ್ನುವುದು ನಮ್ಮ ನಿಲುವಾಗಿದೆ ಎಂದು ಯುಎಇ ರಾಯಭಾರಿ ಹೇಳಿದ್ದಾರೆ.

‘‘ಈ ಬದಲಾವಣೆಯು ಸಾಮಾಜಿಕ ನ್ಯಾಯ ಮತ್ತು ಭದ್ರತೆಯನ್ನು ಬಲಪಡಿಸುವುದು ಹಾಗೂ ಸ್ಥಳೀಯ ಸರಕಾರದಲ್ಲಿ ಜನರ ವಿಶ್ವಾಸವನ್ನು ವೃದ್ಧಿಸುವುದು ಹಾಗೂ ವಲಯದ ಸ್ಥಿರತೆ ಮತ್ತು ಶಾಂತಿಯನ್ನು ಖಾತರಿಪಡಿಸುವುದು ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News