ಜಮ್ಮು-ಕಾಶ್ಮೀರದ ಬೆಳವಣಿಗೆಗಳ ಮೇಲೆ ನಿಕಟ ನಿಗಾ: ಅಮೆರಿಕ

Update: 2019-08-06 16:47 GMT

ವಾಶಿಂಗ್ಟನ್, ಆ. 6: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇನೆ ಎಂದು ಅಮೆರಿಕ ಸೋಮವಾರ ಹೇಳಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ 370ನೇ ವಿಧಿ ರದ್ದತಿ ‘ಸ್ಪಷ್ಟವಾಗಿ ಆಂತರಿಕ ವಿಚಾರ’ ಎಂದು ಭಾರತ ಸರಕಾರ ಹೇಳಿರುವುದನ್ನೂ ಗಮನಕ್ಕೆ ತೆಗೆದುಕೊಂಡಿದ್ದೇನೆ ಎಂದು ಹೇಳಿರುವ ಅಮೆರಿಕ, ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ಎಲ್ಲ ಪಕ್ಷಗಳನ್ನು ಒತ್ತಾಯಿಸಿದೆ.

‘‘ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನವನ್ನು ಪರಿಷ್ಕರಿಸುವ ಭಾರತದ ಘೋಷಣೆ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಭಾರತದ ಯೋಜನೆಯನ್ನು ನಾವು ಗಮನಿಸಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಒರ್ಟಗಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಈ ಕ್ರಮಗಳು ಸ್ಪಷ್ಟವಾಗಿ ಭಾರತದ ಆಂತರಿಕ ವಿಚಾರ ಎಂದು ಭಾರತ ಸರಕಾರ ಹೇಳಿರುವುದನ್ನೂ ನಾವು ಗಮನಿಸಿದ್ದೆವೆ’’ ಎಂದೂ ಅವರು ಹೇಳಿದ್ದಾರೆ.

ಆದರೆ, ಬಂಧನ ವರದಿಗಳ ಬಗ್ಗೆ ಅಮೆರಿಕ ಕಳವಳಗೊಂಡಿದೆ ಎಂದು ಅವರು ಹೇಳಿದ್ದಾರೆ. ‘‘ವೈಯಕ್ತಿಕ ಹಕ್ಕುಗಳನ್ನು ಗೌರವಿಸುವಂತೆ ಮತ್ತು ಸಂಬಂಧಿತ ಸಮುದಾಯಗಳ ಜನರೊಂದಿಗೆ ಮಾತುಕತೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ’’ ಎಂದಿದ್ದಾರೆ.

‘‘ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ನಾವು ಕರೆ ನೀಡುತ್ತೇವೆ’’ ಎಂದು ಮೋರ್ಗನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News