ಕಾರು, ದ್ವಿಚಕ್ರ ವಾಹನ ಮಾರಾಟ ಕುಸಿತ: ಆಟೊಮೊಬೈಲ್ ಕ್ಷೇತ್ರದಲ್ಲಿ 3,50,000 ಉದ್ಯೋಗ ನಷ್ಟ

Update: 2019-08-07 13:54 GMT

ಹೊಸದಿಲ್ಲಿ, ಆ.7: ಕಳೆದ ಎಪ್ರಿಲ್‌ನಿಂದ ಕಾರು ಮತ್ತು ಮೋಟಾರ್ ಸೈಕಲ್‌ಗಳ ಮಾರಾಟ ಭಾರೀ ಪ್ರಮಾಣದಲ್ಲಿ ಕುಸಿತವಾಗಿದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ ಸುಮಾರು 3,50,000 ಉದ್ಯೋಗ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ತೆರಿಗೆ ಹೆಚ್ಚಳ ಮತ್ತು ಬೇಡಿಕೆ ಕುಸಿತ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಮಾರಾಟ ಕುಸಿದಿರುವುದರಿಂದ ವಾಹನ ತಯಾರಕರು, ಬಿಡಿಭಾಗ ಉತ್ಪಾದಕರು ಹಾಗೂ ಮಾರಾಟಗಾರರು ತಮ್ಮ ಉದ್ದಿಮೆಯನ್ನು ಮುಚ್ಚುವ ಅನಿವಾರ್ಯತೆಗೆ ಸಿಲುಕಿದ್ದು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಕಾರು ಮತ್ತು ಮೋಟಾರ್‌ಸೈಕಲ್ ತಯಾರಕರು 15,000 ಉದ್ಯೋಗಿಗಳನ್ನು, ಬಿಡಿ ಭಾಗ ತಯಾರಕರು 1,00,000 ಉದ್ಯೋಗಿಗಳನ್ನು , ಹಾಗೂ ವಾಹನ ಮಾರಾಟಗಾರರು ಸುಮಾರು 2,35,000 ಉದ್ಯೋಗಿಗಳನ್ನು ಕೈ ಬಿಟ್ಟಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಮಾರಾಟ ಕುಸಿದಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಸುಮಾರು 1,700 ತಾತ್ಕಾಲಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಜಪಾನ್‌ನ ಮೋಟಾರು ಸೈಕಲ್ ತಯಾರಕ ಸಂಸ್ಥೆ ಯಮಾಹ ಮೋಟರ್ಸ್ ಹಾಗೂ ವಾಹನ ಬಿಡಿಭಾಗ ತಯಾರಕ ಸಂಸ್ಥೆಗಳಾದ ಫ್ರಾನ್ಸ್‌ನ ವಲಿಯೊ, ಮತ್ತು ಜಪಾನ್‌ನ ಸುಬ್ರೋಸ್ ನಿರ್ಧರಿಸಿದೆ. ಇದರಲ್ಲಿ ಸುಬ್ರೋಸ್ ಸಂಸ್ಥೆ ಸುಮಾರು 800 ಕೆಲಸಗಾರರನ್ನು ಮನೆಗೆ ಕಳುಹಿಸಿದೆ ಎಂದು ವರದಿಯಾಗಿದೆ. ಬಿಡಿಭಾಗ ತಯಾರಿಸುವ ದೇಶೀಯ ಸಂಸ್ಥೆ ವೀಜಿ ಕೌಶಿಕೊ 500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಮೋಟಾರು ವಾಹನ ಮಾರಾಟ ಮಾಡುವ ‘ವೀಲ್ಸ್ ಇಂಡಿಯಾ’ ಸುಮಾರು 800 ತಾತ್ಕಾಲಿಕ ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದೆ. ಅಲ್ಲದೆ ಕೆಲಸ ಪಾಳಿ(ಶಿಫ್ಟ್) ಯನ್ನೂ ರದ್ದುಗೊಳಿಸಲು ನಿರ್ಧರಿಸಿದೆ. ಹೋಂಡಾ ಮೋಟಾರ್, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆ ವಾಹನಗಳಿಗೆ ಬೇಡಿಕೆ ಕುಸಿದ ಕಾರಣ ಸ್ವಲ್ಪ ಸಮಯ ಉತ್ಪಾದನಾ ಕ್ಷೇತ್ರದ ಕಾರ್ಯವನ್ನು ಸ್ಥಗಿತಗೊಳಿಸಿದೆ.

ದೇಶದ ಜಿಡಿಪಿಗೆ ಶೇ.7ಕ್ಕೂ ಹೆಚ್ಚಿನ ಕೊಡುಗೆ ನೀಡುವ ವಾಹನ ಕ್ಷೇತ್ರವು ಅತ್ಯಧಿಕ ಪ್ರಮಾಣದ ಕುಸಿತ ಎದುರಿಸುತ್ತಿದೆ. ಜುಲೈವರೆಗಿನ 9 ತಿಂಗಳಾವಧಿಯಲ್ಲಿ ಪ್ರಯಾಣಿಕರ ವಾಹನದ ಮಾರಾಟ ಕುಸಿದಿದೆ. ತಿಂಗಳಿನಿಂದ ತಿಂಗಳಿಗೆ ಕುಸಿತ ಮುಂದುವರಿದಿದ್ದು 9 ತಿಂಗಳಲ್ಲಿ ಒಟ್ಟು ಶೇ.30ರಷ್ಟು ಬೇಡಿಕೆ ಕುಸಿದಿದೆ. ಮಾನವ ಸಂಪನ್ಮೂಲವು ಬದಲಾವಣೆ ಮಾಡಬಹುದಾದ ಏಕೈಕ ಕ್ಷೇತ್ರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂದು ಅಟೊಮೊಟಿವ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಸಿಎಂಎ)ದ ಪ್ರಧಾನ ನಿರ್ದೇಶಕ ವಿನ್ನಿ ಮೆಹ್ತಾ ಹೇಳಿದ್ದಾರೆ.

ಒಂದು ವರ್ಷದ ಹಿಂದೆ ಶೇ.5.66ರಷ್ಟಿದ್ದ ನಿರುದ್ಯೋಗದ ದರ 2019ರ ಜುಲೈ ಅಂತ್ಯಕ್ಕೆ ಶೇ.7.51ಕ್ಕೆ ಹೆಚ್ಚಿದೆ ಎಂದು ಖಾಸಗಿ ಅಂಕಿಅಂಶ ಸಂಸ್ಥೆ ತಿಳಿಸಿದೆ. 15 ವಾಹನ ತಯಾರಕ ಸಂಸ್ಥೆಗಳ ಕನಿಷ್ಟ ಶೇ.7ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ‘ಸೊಸೈಟಿ ಆಫ್ ಇಂಡಿಯನ್ ಅಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್’ನ ಪ್ರಧಾನ ನಿರ್ದೇಶಕ ವಿಷ್ಣು ಮಾಥುರ್ ಹೇಳಿದ್ದಾರೆ. ದೇಶದ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಝುಕಿ ಕಳೆದ 6 ತಿಂಗಳಲ್ಲಿ ತನ್ನ ತಾತ್ಕಾಲಿಕ ಉದ್ಯೋಗಿಗಳ ಪ್ರಮಾಣದಲ್ಲಿ ಶೇ.6ರಷ್ಟು ಕಡಿತ ಮಾಡಿದೆ. ಟಾಟಾ ಮೋಟರ್ಸ್ ಕಳೆದ ಎರಡು ವಾರದಲ್ಲಿ ತನ್ನ ನಾಲ್ಕು ಉತ್ಪಾದನಾ ಘಟಕಗಳನ್ನು ವಾರದ ಮಟ್ಟಿಗೆ ಮುಚ್ಚಿದೆ. ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ತನ್ನ ವಿವಿಧ ಘಟಕಗಳಲ್ಲಿ ಸುಮಾರು 13 ದಿನ ಉತ್ಪಾದನಾ ಕಾರ್ಯ ಸ್ಥಗಿತಗೊಂಡಿದೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ತಿಳಿಸಿದೆ. ಹೋಂಡಾವು ರಾಜಸ್ತಾನದಲ್ಲಿರುವ ತನ್ನ ಕಾರು ತಯಾರಕ ಘಟಕದಲ್ಲಿ ಕೆಲವು ಮಾದರಿ ಕಾರಿನ ಉತ್ಪಾದನೆಯನ್ನು ಜುಲೈ 16ರಿಂದ ಸ್ಥಗಿತಗೊಳಿಸಿದ್ದರೆ, ಗ್ರೇಟರ್ ನೋಯ್ಡಾದಲ್ಲಿರುವ ಘಟಕದಲ್ಲಿ ಜುಲೈ 26ರಿಂದ 15 ದಿನ ಕಾರ್ಯಸ್ಥಗಿತಕ್ಕೆ ನಿರ್ಧರಿಸಲಾಗಿದೆ . ಈ ವರ್ಷವಿಡೀ ಉತ್ಪಾದನೆಯ ನಿರ್ವಹಣೆ ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತೆರಿಗೆ ಕಡಿತಕ್ಕೆ ಆಗ್ರಹ

ಕುಸಿತದ ಹಾದಿಯಲ್ಲಿರುವ ವಾಹನ ಕ್ಷೇತ್ರದ ಪುನಶ್ಚೇತನಕ್ಕೆ ತೆರಿಗೆ ಕಡಿತ ಹಾಗೂ ಮಾರಾಟಗಾರರಿಗೆ ಮತ್ತು ಖರೀದಿಗಾರರಿಗೆ ಸುಲಭ ದರದಲ್ಲಿ ಸಾಲ ನೀಡುವ ಯೋಜನೆ ಪ್ರಕಟಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಲಾಗಿದೆ ಎಂದು ಎಸಿಎಂಎ ತಿಳಿಸಿದೆ. ವಾಹನ ಕ್ಷೇತ್ರದಲ್ಲಿ ಆಗಿರುವ ಹಿಂಜರಿತ ಇನ್ನಷ್ಟು ಅಗಾಧ ರೂಪ ತಳೆಯಬಹುದು. ವಾಹನ ಕ್ಷೇತ್ರವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 3.5 ಕೋಟಿಗೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಿದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News