ರೆಪೊ ದರ ಇಳಿಕೆ; ವಾಹನ, ಗೃಹ ಸಾಲ ಅಗ್ಗ ಸಾಧ್ಯತೆ

Update: 2019-08-07 15:24 GMT

ಹೊಸದಿಲ್ಲಿ, ಆ.7: ಈ ಆರ್ಥಿಕ ವರ್ಷದಲ್ಲಿ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಕಡಿತಗೊಳಿಸಿದ್ದು ಇದರಿಂದ ಬ್ಯಾಂಕ್‌ಗಳು ವಾಹನ ಸಾಲ ಹಾಗೂ ಗೃಹ ಸಾಲದ ಮೇಲೆ ವಿಧಿಸುವ ಬಡ್ಡಿದರವೂ ಕಡಿಮೆಯಾಗುವ ನಿರೀಕ್ಷೆಯಿದೆ.

ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ನೀಡುವಾಗ ವಿಧಿಸುವ ಬಡ್ಡಿ ದರವನ್ನು ರೆಪೊ ದರ ಎನ್ನಲಾಗುತ್ತದೆ. ಆರ್‌ಬಿಐಯ ವಿತ್ತೀಯ ಕಾರ್ಯನೀತಿ ಸಮಿತಿ ರೆಪೊ ದರದಲ್ಲಿ ಶೇ. 0.35 (35 ಮೂಲಾಂಕ) ಕಡಿತಗೊಳಿಸಿದ್ದು ದರವನ್ನು 5.75%ದಿಂದ ಶೇಕಡಾ 5.40ಕ್ಕೆ ಇಳಿಸಲಾಗಿದೆ. ಕಳೆದ 9 ವರ್ಷಗಳಲ್ಲೇ ಇದು ಅತ್ಯಂತ ಕನಿಷ್ಟ ದರವಾಗಿದೆ.

ರಿಸರ್ವ್ ಬ್ಯಾಂಕ್‌ನ ಹಾಲಿ ಆರ್ಥಿಕ ವರ್ಷದ ಮೂರನೇ ವಿತ್ತೀಯ ಕಾರ್ಯನೀತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು: ರಿವರ್ಸ್ ರೆಪೊ ದರವನ್ನು ಶೇ.5.15ಕ್ಕೆ ಪರಿಷ್ಕರಿಸುವುದು. ಎಂಎಸ್‌ಎಫ್ (ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ) ದರ ಮತ್ತು ಬ್ಯಾಂಕ್ ದರ ಶೇ.5.65ರಲ್ಲಿ ಸ್ಥಿರಗೊಳಿಸುವುದು. ಜೂನ್‌ನಲ್ಲಿ ಜಿಡಿಪಿ ಪೂರ್ವಾನುಮಾನವನ್ನು ಶೇ.7ಕ್ಕೆ ನಿಗದಿಗೊಳಿಸಿದ್ದರೆ ಅದನ್ನು ಈ ಬಾರಿಯ ಸಭೆಯಲ್ಲಿ ಶೇ.6.9ಕ್ಕೆ ಪರಿಷ್ಕರಿಸಲಾಗಿದೆ.

ಎಸ್‌ಬಿಐ ಗೃಹ ಸಾಲ ಬಡ್ಡಿದರ ಕಡಿತ

ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬುಧವಾರ ಗೃಹ ಸಾಲದ ದರವನ್ನು ಕಡಿತಗೊಳಿಸಿದೆ. ಎಂಸಿಎಲ್‌ಆರ್(ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್)ನಲ್ಲಿ 15 ಮೂಲಾಂಕದಷ್ಟು ಕಡಿತಗೊಳಿಸಲಾಗಿದ್ದು ಹೊಸ ದರಗಳು ಆಗಸ್ಟ್ 10ರಿಂದ ಚಾಲ್ತಿಯಲ್ಲಿರುತ್ತದೆ ಎಂದು ಎಸ್‌ಬಿಐ ಹೇಳಿದೆ. ಇದರಿಂದ ಎಪ್ರಿಲ್ 10ರ ಬಳಿಕ ಗೃಹ ಸಾಲ ಬಡ್ಡಿದರದಲ್ಲಿ 35 ಮೂಲಾಂಕದಷ್ಟು ಕಡಿತವಾಗಿದೆ. ಆರ್‌ಬಿಐಯ ವಿತ್ತೀಯ ಕಾರ್ಯನೀತಿ ಸಮಿತಿ ರೆಪೊ ದರವನ್ನು ಕಡಿತಗೊಳಿಸಿದ ಕೆಲವೇ ಗಂಟೆಗಳ ಬಳಿಕ ಎಸ್‌ಬಿಐಯ ಹೇಳಿಕೆ ಹೊರಬಿದ್ದಿದೆ. ಆರ್‌ಬಿಐನ ರೆಪೊ ದರ ಕಡಿತದ ಪೂರ್ಣ ಲಾಭವನ್ನು 1 ಲಕ್ಷ ರೂ.ಗಿಂತ ಹೆಚ್ಚಿನ ಮಿತಿಯ ಓವರ್‌ಡ್ರಾಫ್ಟ್, ನಗದು ಸಾಲ ಸೌಲಭ್ಯ ಹೊಂದಿರುವ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ಹೇಳಿಕೆ ತಿಳಿಸಿದೆ. ಇದರೊಂದಿಗೆ ಎಸ್‌ಬಿಐಯ ರೆಫೊ ಸಂಯೋಜಿತ ಸಾಲ ದರ(ಆರ್‌ಎಲ್‌ಎಲ್‌ಆರ್) ದರವನ್ನು ಸೆಪ್ಟೆಂಬರ್ 1ರಿಂದ ಶೇ.7.65ಕ್ಕೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಕಳೆದ ವಾರ ಎಸ್‌ಬಿಐ ಹಾಲಿ ವಿತ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯ ಅಂಕಿಅಂಶವನ್ನು ಬಿಡುಗಡೆಗೊಳಿಸಿದ್ದು ಎಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಬ್ಯಾಂಕ್ 2,312.20 ಕೋಟಿ ರೂ. ನಿವ್ವಳ ಲಾಭ ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News