ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ರೈಲ್ವೆ ಉದ್ಯೋಗಿಗಳಿಬ್ಬರ ಅಮಾನತು

Update: 2019-08-07 15:28 GMT

ಹೊಸದಿಲ್ಲಿ, ಆ.7: ದಿಲ್ಲಿ-ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವತಿಯೋರ್ವಳಿಗೆ ಮತ್ತು ಬರಿಸುವ ಮದ್ದನ್ನು ತಿನ್ನಿಸಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ) ಮತ್ತು ಪ್ಯಾಂಟ್ರಿ ಸಿಬ್ಬಂದಿಯನ್ನು ಭಾರತೀಯ ರೈಲ್ವೆಯು ಬುಧವಾರ ಸೇವೆಯಿಂದ ಅಮಾನತುಗೊಳಿಸಿದೆ.

ಮಂಗಳವಾರ ಈ ಘಟನೆಯು ನಡೆದಿತ್ತು.

  ‘ಟಿಟಿಇ ಮತ್ತು ಪ್ಯಾಂಟ್ರಿ ವೇಟರ್ ಯುವತಿಗೆ ಮತ್ತು ಬರಿಸುವ ಮದ್ದು ಬೆರೆಸಿದ್ದ ಐಸ್‌ಕ್ರೀಂ ತಿನ್ನಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ.ಯಾವುದೇ ಎಫ್‌ಐಆರ್ ಇಲ್ಲದೆ ರೈಲ್ವೆ ಇಲಾಖೆಯು ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಕ್ರಮವನ್ನು ಜರುಗಿಸುವುದೇ ಅಥವಾ ಅವರು ಆರಾಮವಾಗಿದ್ದುಕೊಂಡು ಇನ್ನೋರ್ವ ಪ್ರಯಾಣಿಕ ಮಹಿಳೆಗೆ ಭೀತಿಯನ್ನೊಡ್ಡುವರೇ’ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದ ಯುವತಿಯ ಗೆಳತಿ, ‘ಸಂತ್ರಸ್ತ ಯುವತಿ ವಿದ್ಯಾರ್ಥಿನಿಯಾಗಿದ್ದು, ಕಾನೂನು ಗೋಜಲಿನಲ್ಲಿ ಸಿಕ್ಕಿಹಾಕಿಕೊಳ್ಳಲು ಭೀತಿಗೊಂಡಿದ್ದಾಳೆ ’ಎಂದು ತಿಳಿಸಿದ್ದಳು. ಟ್ವೀಟ್‌ನ್ನು ಆಕೆ ರೈಲ್ವೆ ಸಚಿವ ಪಿಯೂಷ ಗೋಯಲ್ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಳು. ಆದರೆ ಈವರೆಗೆ ಎಫ್‌ಐಆರ್ ದಾಖಲಾಗಿಲ್ಲ. ದೂರವಾಣಿಯಲ್ಲಿ ದೂರುದಾರಳಿಂದ ಘಟನೆಯ ವಿವರಗಳನ್ನು ಪಡೆದುಕೊಂಡ ರೈಲ್ವೆಯು ಆರೋಪಿಗಳ ವಿಚಾರಣೆ ನಡೆಸಿದೆ. ಟಿಟಿಇ ಎನ್.ಆರ್.ಸರೋಜ್ ಮತ್ತು ವೇಟರ್‌ನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ   ಎಂದು   ರೈಲ್ವೆ    ಇಲಾಖೆಯು       ಹೇಳಿಕೆಯಲ್ಲಿ       ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News