ಜಮ್ಮು ಕಾಶ್ಮೀರ: ಓರ್ವ ಪ್ರತಿಭಟನಾಕಾರ ಸಾವು, 6 ಮಂದಿಗೆ ಗಾಯ

Update: 2019-08-07 15:51 GMT

ಕಾಶ್ಮೀರ, ಆ. 7: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ವಿಧಿ 370ನ್ನು ರದ್ದುಗೊಳಿಸಿರುವ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿರುವ ಹಿನ್ನೆಲೆಯಲ್ಲಿ ಬುಧವಾರ ಕೆಲವು ಅಹಿತಕರ ಘಟನೆಗಳು ನಡೆದಿವೆ. ಶ್ರೀನಗರದಲ್ಲಿ ಕರ್ಫ್ಯೂ ಉಲ್ಲಂಘಿಸಿ ಪ್ರತಿಭಟನೆ ನಡೆಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬೆನ್ನಟ್ಟಿರುವುದರಿಂದ ಆತ ಝೀಲಂ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದಲ್ಲದೆ ರಾಜಕೀಯ ನಾಯಕರು ಸೇರಿದಂತೆ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಪ್ರತಿಭಟನಕಾರನ ಸಾವನ್ನು ದೃಢಪಡಿಸಿರುವ ಪೊಲೀಸರು, ಜಮ್ಮು ಹಾಗೂ ಕಾಶ್ಮೀರದ ಮೂರು ವಲಯಗಳಲ್ಲಿ ಕಲ್ಲು ತೂರಾಟದ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬೆನ್ನಟ್ಟಿದ್ದರು. ಆತ ಝೀಲಂ ನದಿಗೆ ಹಾರಿದ ಪರಿಣಾಮ ಸಾವನ್ನಪ್ಪಿದ. ಇದಲ್ಲದೆ, ಪೊಲೀಸರ ಗುಂಡಿನಿಂದ ಗಾಯಗೊಂಡಿರುವ ಕನಿಷ್ಠ 6 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪೂಂಛ್ ಜಿಲ್ಲೆಯ ಬಾಫ್ಲೈಝ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಶಾಂತಿ ಹಾಗೂ ನೆಮ್ಮದಿಗೆ ಬೆದರಿಕೆ ಎಂದು ಪರಿಗಣಿಸಿ ರಾಜಕೀಯ ನಾಯಕರು ಹಾಗೂ ಹೋರಾಟಗಾರು ಸೇರಿದಂತೆ 100ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಂಧಿತರ ವಿವರಗಳನ್ನು ಅವರು ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ ಪರಿಗಣಿಸಿ ರವಿವಾರದಿಂದ ಗೃಹ ಬಂಧನದಲ್ಲಿ ಇರಿಸಲಾಗಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹಾಗೂ ಉಮರ್ ಅಬ್ದುಲ್ಲಾ ಅವರನ್ನು ಸೋಮವಾರ ರಾತ್ರಿಯಿಂದ ಬಂಧನದಲ್ಲಿ ಇರಿಸಲಾಗಿದೆ. ‘ಜಮ್ಮು ಆ್ಯಂಡ್ ಕಾಶ್ಮೀರ್ ಪೀಪಲ್ಸ್ ಕಾನ್ಫರೆನ್ಸ್‌ನ’ನ ನಾಯಕರಾದ ಸಜ್ಜಾದ್ ಲೋನೆ ಹಾಗೂ ಇಮ್ರಾನ್ ಅನ್ಸಾರಿ ಅವರನ್ನು ಕೂಡ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News